ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇಗುಲದ ಆವರಣದ ದುರ್ಗಾಮಂಟಪದಲ್ಲಿ 17ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅ.11ರಿಂದ 21ರವರೆಗೆ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದರು.
ನವರಾತ್ರಿ ಉತ್ಸವದ ಕಾರ್ಯಕ್ರಮಗಳ ಮಾಹಿತಿ ಬಿಡುಗಡೆಗೊಳಿಸಿ ಮಾಹಿತಿ ನೀಡಿ, 11ದಿನ ಲೋಕಕಲ್ಯಾಣಾರ್ಥಶ್ರೀದೇವಿಗೆ ತ್ರಿಕಾಲ ಪೂಜೆ, ಸಪ್ತಶತೀ ಪಾರಾಯಣ ನೆರವೇರಿಸಲಾಗುವುದು. ಪ್ರತಿನಿತ್ಯ ರಾತ್ರಿ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಧರ್ಮಾವಲಂಬಿತವಾದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿನಿತ್ಯ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ವಿಜಯದಶಮಿ ದಿನ 15 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಅ.11ರಂದು ಬೆಳಗ್ಗೆ ದುರ್ಗಾದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಜಿ.ರಾಜಗೋಪಾಲ ಜೋಷಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅ.20ರಂದು ಜನಜಾಗೃತಿ ಧರ್ಮಸಭೆ ನಡೆಯಲಿದ್ದು, ಕರದಾಳ ಬ್ರಹ್ಮ ಶ್ರೀನಾರಾಯಣಗುರು ಶಕ್ತಿಪೀಠದ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಶಿವಮೊಗ್ಗದ ಪ್ರೇರಕ ಭಾಷಣಕಾರ ಡಾ.ರಾಹುಲ್ ದೇವರಾಜ್ ಧರ್ಮ ಸಂರಕ್ಷಣೆ ಕುರಿತು ಮಾತನಾಡಲಿದ್ದಾರೆ.
ಅ.21ರಂದು ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನ ದುರ್ಗಾದೇವಿ ಶೋಭಾಯಾತ್ರೆ ವಿವಿಧ ಕಲಾತಂಡಗಳೊಂದಿಗೆ ನಡೆದು ಭದ್ರಾನದಿಯಲ್ಲಿ ಭದ್ರಾರತಿಯ ಧಾರ್ಮಿಕ ಕಾರ್ಯ ನಡೆದು ದುರ್ಗಾವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಮಾಹಿತಿ ನೀಡಿ, ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಸುವ ಉದ್ದೇಶದಿಂದ ನವರಾತ್ರಿ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ. ನವರಾತ್ರಿ ಮಹೋತ್ಸವದಲ್ಲಿ ವಿಶೇಷವಾಗಿ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ, ಗಾಯನ ಸ್ಪರ್ಧೆ, ರಕ್ತದಾನ ಶಿಬಿರ, ದುರ್ಗಾಹೋಮ, ಹೂವಿನ ಪೂಜೆ, ಪಾರಾಯಣ, ಅಷ್ಟೋತ್ತರ, ಅಕ್ಷರಾಭ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.
ಈ ಬಾರಿ ನಿತ್ಯ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ನಾಮಕರಣ ಮಾಡಿ ಕಲೆಯನ್ನು ಹೆಚ್ಚು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಕಡೆಯ ದಿನದ ಶೋಭಾಯಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯದ ವಿವಿಧೆಡೆಯ ಕಲೆ, ಸಂಸ್ಸತಿಯನ್ನು ಬಿಂಬಿಸುವ 20ಕ್ಕೂ ಅಧಿಕ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಅ.11 ಆಕಾಶವಾಣಿ ಕಲಾವಿದ ಶಿವರುದ್ರಪ್ಪ ಎನ್.ಜೋಗಿ ತಂಡದಿಂದ ಕಿನ್ನರಿ ಜೋಗಿ ಜಾನಪದ ಕಾರ್ಯಕ್ರಮ,12ಕ್ಕೆ ಹಿರೇನಲ್ಲೂರು ಶ್ರೀನಿವಾಸ್ ತಂಡದಿಂದ ಸುಗಮ ಸಂಗೀತ. 13 ಎಂದು ಪುತ್ತೂರು ಸಂಸಾರ ಕಲಾವಿದರಿಂದ ನಂಬಿಕೆದಾಯೆ ತುಳು ನಾಟಕ. 14ಕ್ಕೆ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ. 15ರಂದು ಕಳಸದ ಕಲಾ ಸಿಂಚನ ತಂಡದಿಂದ ನೃತ್ಯ, ಸಂಗೀತ ಕಾರ್ಯಕ್ರಮ,16ಕ್ಕೆ ಕುಡ್ಲದ ಬೆನಕ ಆರ್ಟ್ಸ್ ಕಲಾವಿದರಿಂದ ಪೊರಿಪಿನ ಮಾತೆ ಜಲದುರ್ಗೆ ಕನ್ನಡ ನಾಟಕ. 17ಕ್ಕೆ ಶ್ರೀರಾಮ್ ಜಾದೂಗಾರ್ ತಂಡದಿಂದ ಮಾಯಾಲೋಕ ಕಾರ್ಯಕ್ರಮ. 18 ರಂದು ಕುಡ್ಲ ಲಕುಮಿ ತಂಡದಿಂದ ಆಂಟಿ ಬೊಕ್ಕ ಅಂಕಲ್ ತುಳು ನಾಟಕ. 19ಕ್ಕೆ ಜೂಮ್ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ಲೋಕ. 20 ರಂದು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 21ರಂದು ಹನುಮಂತ ಹಾಗೂ ಗಾಯಕಿ ಕಲಾವತಿ ದಯಾನಂದ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.