ಕಡೂರಲ್ಲಿ ಆಯೋಜಿಸಿದ್ದ ಎಸ್‌ಐಆರ್ ಪ್ರಕ್ರಿಯೆಯ ಮಾಹಿತಿ ಕಾರ್ಯಗಾರದಲ್ಲಿ ಬಿ.ಎಂ.ಸಂದೀಪ್, ಕೆ.ಎಸ್.ಆನಂದ್, ಪ್ರಸನ್ನ, ಭಂಡಾರಿಶ್ರೀನಿವಾಸ್, ಶರತ್ ಕೃಷ್ಣಮೂರ್ತಿ ಮತ್ತಿತರಿದ್ದರು. 
ಚಿಕ್ಕಮಗಳೂರು

ಪರಿಷ್ಕರಣೆ ನೆಪದಲ್ಲಿ ಮತದಾರರರನ್ನು ಕೈ ಬಿಡುವ ಹುನ್ನಾರ

ಕಡೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಷಡ್ಯಂತ್ರ ಇದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು.
ಕಡೂರಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್‌ಐಆರ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಆಯೋಜಿಸಿದ್ದ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಗಳು ಹಿಂದೆಗಿಂತ ವೇಗ ಪಡೆದುಕೊಳ್ಳುತ್ತಿದೆ. ಎಸ್‌ಐಆರ್ ನೆಪದಲ್ಲಿ ಅರ್ಹ ಮತದಾರರ ಹೆಸರನ್ನು ವ್ಯವಸ್ಥಿತವಾಗಿ ಕೈ ಬಿಡುವ ಹುನ್ನಾರ ಅಡಗಿದೆ ಎಂದರು.
2002ರ ವೇಳೆಗೆ ದೇಶದಲ್ಲಿ 8 ಬಾರಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಪರಿಷ್ಕರಣೆಗೆ ವಿಶೇಷ ಎಂಬ ಒತ್ತು ನೀಡಿ ಮತದಾನದ ಹಕ್ಕನ್ನು ಕಸಿಯುವ ಕುತಂತ್ರಕ್ಕೆ ಕೇಂದ್ರ ಸರ್ಕಾರ ಚುನಾವಣಾ ಆಯೋಗವು ಕೈ ಜೋಡಿಸಿರುವುದು ದುರದೃಷ್ಟಕರ ಸಂಗತಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ತನಿಖಾ ಸಂಸ್ಥೆಗಳನ್ನು ತನ್ನ ಮೂಗಿನ ನೇರಕ್ಕೆ ಕೆಲಸ ಮಾಡುವಂತೆ ಪ್ರೇರೆಪಿಸುತ್ತಿದ್ದು, ಕೇಂದ್ರ ಸರ್ಕಾರ ಕೊನೆ ಹಂತವಾಗಿ ಚುನಾವಣಾ ಆಯೋಗದ ಅಸ್ತಿತ್ವಕ್ಕೆ ಕೊಡಲಿ ಏಟು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಈ ಎಸ್‌ಐಆರ್ ವ್ಯವಸ್ಥಿತ ಪ್ರಯೋಗದಿಂದ ಲಕ್ಷಾಂತರ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತರು ಈ ಎಸ್‌ಐಆರ್ ಮೂಲಕ ತಮ್ಮ ಮತದಾನದ ಹಕ್ಕನ್ನು ಕಳೆದಕೊಂಡು ಬಲಿಪಶುಗಳಾಗುತ್ತಿದ್ದಾರೆ ಎಂದು ದೂರಿದರು.