ಮೂಡಿಗೆರೆಯಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುವಮ್ಮ ಅವರ ಅರೋಗ್ಯವನ್ನು ಎಸಿಎಫ್ ಆಕರ್ಷ್,ಆರ್‌ಎಫ್‌ಒ ಮಂಜುನಾಥ್, ಎಆರ್‌ಎಫ್‌ಒ ರವಿರಾಜ್, ಗ್ರಾಮದ ಮುಖಂಡ ದೀಪಕ್ ವಿಚಾರಿಸಿದರು 
ಚಿಕ್ಕಮಗಳೂರು

ಕಾಡಾನೆ ದಾಳಿಯಿಂದ ಗಾಯಗೊಂಡ ಮಹಿಳೆಗೆ ಸೂಕ್ತ ಪರಿಹಾರ

ಮೂಡಿಗೆರೆ: ಕಾಡಾನೆ ದಾಳಿಯಿಂದ ಗಾಯಗೊಂಡ ತಮಟೆಬೈಲು ಗ್ರಾಮದ ನಿವಾಸಿ, ಕಾರ್ಮಿಕ ಮಹಿಳೆ ಗುರುವಮ್ಮ (45)ಅವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆಸ್ಪತ್ರೆ ವೆಚ್ಚ ಭರಿಸುವ ಜತೆಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ವಿಜಯವಾಣಿಯೊಂದಿಗೆ ಮಾತನಾಡಿ, ಜಿ.ಹೊಸಳ್ಳಿ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಗುರುವಮ್ಮ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಬೇಲೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಗುರುವಮ್ಮ ಅವರ ಸೊಂಟ ಮತ್ತು ಕಾಲಿಗೆ ಚಿಕ್ಕ ಗಾಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.
ಮೂಡಿಗೆರೆ ಎಸಿಎಫ್ ಆಕರ್ಷ, ಆರ್‌ಎಫ್‌ಓ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ರವಿರಾಜ್, ಜಿ.ಹೊಸಳ್ಳಿ ಗ್ರಾಮದ ಪ್ರಮುಖ ದೀಪಕ್ ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗುರುವಮ್ಮ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಕಾಡಾನೆ ದಾಳಿಯಿಂದ ಗಾಯಗೊಂಡವರಿಗೆ 60 ಸಾವಿರ ರೂ.ವರೆಗೆ ಪರಿಹಾರ ನೀಡಲು ಇಲಾಖೆಯಲ್ಲಿ ಅವಕಾಶವಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗುರುವಮ್ಮ ಅವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.