ಕಳಸ ಗ್ರಾಪಂನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಅವಹಾಲನ್ನು ಅಧಿಕಾರಿಗಳಿಗೆ ತಿಳಿಸುತ್ತಿರುವುದು. 
ಚಿಕ್ಕಮಗಳೂರು

ಪಶು ಆಸ್ಪತ್ರೆಗೆ ವೈದ್ಯರ ನೇಮಿಸಿ ನಂತರ ಕಟ್ಟಡ ಉದ್ಘಾಟಿಸಿ

ಕಳಸ: ಕಳಸದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಆಸ್ಪತ್ರೆಗೆ ಪಶು ವೈದ್ಯರ ನೇಮಕವಾಗಿಲ್ಲ. ಮೊದಲು ಪಶು ವೈದ್ಯರನ್ನು ನೇಮಿಸಿ ನಂತರ ಕಟ್ಟಡ ಉದ್ಘಾಟಿಸಬೇಕು ಎಂದು ಕಳಸ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಒಬ್ಬ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಹೆಚ್ಚುವರಿ ವೈದರ ನೇಮಿಸುವಂತೆ ಹಲವು ಬಾರಿ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಹೆಚ್ಚುವರಿ ವೈದ್ಯರನ್ನು ನೇಮಿಸಿ ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕು ಎಂದು ಆಗ್ರಹಿಸಿದರು.
ಕಳಸ ಕೈಮರ ಸಮೀಪ ನಡೆಯುತ್ತಿರುವ ರಸ್ತೆ ಅಗಲೀಕರಣ ಅವೈಜ್ಞಾನಿಕವಾಗಿದೆ. ಕೈಮರದಲ್ಲಿ ಪಂಚಾಯಿತಿಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿರುವ ಆರೋಪವೂ ಕೇಳಿಬಂದಿದೆ. ಪಂಚಾಯಿತಿ ಅನುಮತಿ ಪಡೆಯದೇ ಈ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅನಧಿಕೃತವಾಗಿ ನಿರ್ಮಾಣವಾಗಿದ್ದರೆ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಗ್ರಾಮಸಭೆಯಲ್ಲಿ ಸಿಪಿಐ ಮುಖಂಡರಾದ ಗೋಪಾಲ ಶೆಟ್ಟಿ ಮತ್ತು ಲಕ್ಷ್ಮಣಾಚಾರ್ ಒತ್ತಾಯಿಸಿದರು.
ನೆಲ್ಲಿಕೆರೆ ಪ್ರದೇಶದಲ್ಲಿ ಗ್ರಾಪಂಗೆ ಸೇರಿದ ಜಾಗವನ್ನು ಸಮಗ್ರವಾಗಿ ಸರ್ವೇ ನಡೆಸಿ ಗಡಿ ಗುರುತು ಹಾಕಬೇಕು. ಸರ್ವೇ ನಂ.85ರಲ್ಲಿ ನಿವೇಶನ ರಹಿತರಿಗೆ ಭೂಮಿ ಮಂಜೂರಾಗಿದ್ದು, ಈ ಜಾಗವನ್ನು ಗ್ರಾಪಂನಿಂದ ಬೇಲಿ ಹಾಕಿ ಸಂರಕ್ಷಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಒತ್ತುವರಿಯಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಕಳಸದಲ್ಲಿ ಕಂದಾಯ ಹಾಗೂ ಭೂ ಸಂಬಂಧಿತ ಕೆಲಸಗಳಿಗೆ ಸರ್ವರ್ ಸಮಸ್ಯೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಭೂ ವಿವಾದಗಗಳ ಸರ್ವೇ ನಡೆಸುವಾಗ ಸ್ಥಳೀಯ ಸರ್ವೇಯರ್‌ಗಳು ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೂಡಲೇ ಸರ್ವೇಯರ್‌ಗಳನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥ ರಿಜ್ವಾನ್ ಒತ್ತಾಯಿಸಿದರು.
ಆಡಳಿತಾಧಿಕಾರಿ ಮಂಜುನಾಥ್, ನೋಡಲ್ ಅಧಿಕಾರಿ ಗಣೇಶ್ ಇದ್ದರು.