ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ರಾಜ್ಯಾಧ್ಯಕ್ಷ ಬಿ. ಅಮ್ಮದ್
ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ ೨೫ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ರಾಜ್ಯಾಧ್ಯಕ್ಷ ಬಿ. ಅಮ್ಮದ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರಿನಲ್ಲಿ ಆಗಸ್ಟ್ ೨೫ರಂದು ನಗರದ ಅಜಾದ್ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು. ಕನಿಷ್ಠ ವೇತನ ಜಾರಿಗೊಳಿಸುವುದು, ೧೧ನೇ ವೇತನ ಆಯೋಗದ ಶಿಫಾರಸು ಹಾಗೂ ಗ್ರಾಚ್ಯುಟಿ ಸೇರಿದಂತೆ ಬಾಕಿ ಸೌಲಭ್ಯಗಳನ್ನು ಜಾರಿಗೊಳಿಸುವುದು, ಪ್ರಭಾರ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು.
ಅAಗನವಾಡಿ ಕೆಲಸಕ್ಕೆ ಸಂಬAಧಿಸದ ಎಸ್‌ಐಆರ್ ಸಮೀಕ್ಷೆ, ಜಾತಿ ಪ್ರಮಾಣಪತ್ರಗಳ ವಿತರಣೆ, ಗೃಹಲಕ್ಷ್ಮಿ ಸಮೀಕ್ಷೆ ಸೇರಿದಂತೆ ಹೆಚ್ಚುವರಿ ಕೆಲಸಗಳಿಂದ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು. ಬಿಎಲ್‌ಓ ಕರ್ತವ್ಯದಿಂದಲೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಋತು ಚಕ್ರದ ರಜೆ, ಸಂಬಳ ಸಹಿತ ವೈದ್ಯಕೀಯ ರಜೆ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆಯ ದರ ಹಾಗೂ ತರಕಾರಿ ಖರೀದಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಮೊಟ್ಟೆಗೆ ಸೀಲು ಹಾಕುವಂತೆ ನೀಡಿರುವ ಸೂಚನೆಯನ್ನು ಹಿಂಪಡೆಯಬೇಕು. ಕಳಪೆ ಗುಣಮಟ್ಟದ ಸಮವಸ್ತç ನೀಡುವುದನ್ನು ನಿಲ್ಲಿಸಿ ಉತ್ತಮ ಗುಣಮಟ್ಟದ ಸಮವಸ್ತç ಒದಗಿಸಬೇಕು. ಅಂಗನವಾಡಿ ಕೇಂದ್ರಗಳ ಮಕ್ಕಳ ದಾಖಲಾತಿ ಕುಸಿಯುತ್ತಿರುವ ಸಮಸ್ಯೆಗೂ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ಸ್ಥಳೀಯ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಕೂಡಲೇ ಪರಿಹರಿಸಬೇಕು. ಆಗಸ್ಟ್ ೨೫ರಂದು ನಡೆಯುವ ಹೋರಾಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷೆ ಶೈಲ ಬಸವರಾಜು, ಜಿಲ್ಲಾಧ್ಯಕ್ಷೆ ಗ್ರೇಟ್ಟಾ ಫರ್ನಾಂಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜು ಹಾಗೂ ಜಿಲ್ಲಾ ಖಜಾಂಚಿ ವಸಂತ ಧರ್ಮೇಗೌಡ ಉಪಸ್ಥಿತರಿದ್ದರು.