ಯಗಟಿಯಲ್ಲಿ ಆಯೋಜಿಸಿದ್ದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಅಭಿನಂದಿಸಲಾಯಿತು.  
ಚಿಕ್ಕಮಗಳೂರು

ಈ ಮಹಾಕಾವ್ಯವನ್ನು ಕಲಿಸದೇ ಬುದ್ದಿವಂತ ಜನಾಂಗವೊಂದು ತಪ್ಪು ಮಾಡಿದೆ

ಕಡೂರು: ಮಹಾ ಭಾರತದ ಸಂಸ್ಕೃತಿ ಈಗಲೂ ಭಾರತ ದೇಶದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಜೀವನ ಹೇಗೆ ಇರಬೇಕು, ಯಾವ ರೀತಿ ನಡೆಸಬೇಕು ಎಂಬುದನ್ನು ಸರಳ ಕನ್ನಡದಲ್ಲಿ ತಿಳಿಸಿಕೊಟ್ಟ ಮಹಾಕವಿ ಕುಮಾರವ್ಯಾಸ ಎಂದು ಹೈಕೋರ್ಟ್ ನ್ಯಾಯಮೂರ್ತಿ ಡಾ.ಶ್ರೀಶಾನಂದ ಹೇಳಿದರು.
ಯಗಟಿ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ವ್ಯಾಸ ಪೂಜೆ ಸ್ವೀಕರಿಸಿ ಮಾತನಾಡಿ, ಯಾರ ಹಂಗಿಗೂ ಒಳಗಾಗದೆ, ವಿನಮ್ರ ಭಾವದೊಂದಿಗೆ ಮಹೋನ್ನತ ಕಾವ್ಯ ರಚಿಸಿದವರು ಕುಮಾರವ್ಯಾಸ. ಭಾರತದಾದ್ಯಂತ ಭಾಗವತ, ರಾಮಾಯಣದ ಪಾಠ ಮಾಡುತ್ತಿದ್ದರೇ ಹೊರತು ಮಹಾಭಾರತ ಪಾಠವನ್ನು ಎಲ್ಲಿಯೂ ಹೇಳಿ ಕೊಡುತ್ತಿರಲಿಲ್ಲ. ಆದರೆ ಕರ್ನಾಟಕದ ಗದುಗಿನ ನಾರಣಪ್ಪನ ಕುಮಾರ ವ್ಯಾಸರು ಕರ್ಣಾಟ ಭಾರತ ಕಥಾಮಂಜರಿ ಪಾಠವನ್ನು ಕರುನಾಡಿನಲ್ಲಿ ಪಠ್ಯದಂತೆ ಕಲಿಸುತ್ತಿದ್ದರು ಎಂದರೆ ಆ ಮಹಾಕಾವ್ಯದ ಶ್ರೇಷ್ಠತೆ ಎಷ್ಟಿತ್ತು ಎಂಬುದನ್ನು ಅರಿಯಬಹುದು ಎಂದರು.
ಹೆಣ್ಣು ಮಕ್ಕಳಿಗೆ ಗೌರವ ಇಲ್ಲದಿದ್ದರೆ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಕುಮಾರವ್ಯಾಸರು ಕನ್ನಡದಲ್ಲಿ ಮನೋಜ್ಞವಾಗಿ ತಿಳಿಸಿಕೊಟ್ಟಿದ್ದಾರೆ. ಕುಮಾರವ್ಯಾಸ ಭಾರತವನ್ನು ತಾವೂ ಕಲಿಯದೇ, ಇತರರಿಗೂ ಕಲಿಸದೇ ಬುದ್ದಿವಂತ ಜನಾಂಗವೊಂದು ತಪ್ಪು ಮಾಡಿದೆ. ಮಹಾಕಾವ್ಯವನ್ನು ಕೇವಲ ಶೋಕೇಸ್‌ಗೆ ಸೀಮಿತ ಮಾಡಿರುವುದು ವಿಪರ್ಯಾಸ ಎಂದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕುಮಾರವ್ಯಾಸ ಗ್ರಾಮೀಣ ಸೊಗಡಿನ ಕವಿ. ಕರ್ನಾಟ ಭಾರತ ಕಥಾ ಮಂಜರಿಯಲ್ಲಿ ಕನ್ನಡ ಗ್ರಾಮೀಣ ಭಾಷೆ ಸೊಗಡನ್ನು ಅನುಭವಿಸಬಹುದು. ಕೇವಲ ರಾಮಾಯಣ ಕಥಾ ವಸ್ತುವನ್ನು ಇಟ್ಟುಕೊಂಡು ಕಾವ್ಯರಚಿಸುತ್ತಿದ್ದ ಕವಿಗಳು ಹೇರಳವಾಗಿದ್ದ ಕಾಲದಲ್ಲಿ ಕುಮಾರವ್ಯಾಸ ಮಹಾ ಭಾರತ ಕಥಾವಸ್ತುವನ್ನು ಕಾವ್ಯರೂಪಕ್ಕೆ ತರುವ ಸಾಹಸ ಮಾಡಿದರು ಎಂದು ತಿಳಿಸಿದರು.
ಕಾವ್ಯರಚನಾ ಶೈಲಿ,ಪದ ಬಳಕೆಯಲ್ಲಿ ಕುಮಾರವ್ಯಾಸನನ್ನು ಮೀರಿಸಿದವರಿಲ್ಲ. ವೇದ ಪುರುಷನ ಎಂಬ ಪದ್ಯದಲ್ಲಿ ಕಾವ್ಯಾಸಕ್ತರನ್ನು ತಿಣುಕುವಂತೆ ಮಾಡಿದ್ದಾರೆ. ಕನಕದಾಸರಂತೆ ಹೇಳುವುದನ್ನು ಒಗಟಾಗಿ ಹೇಳುವ, ಆ ಒಗಟಿನಲ್ಲಿ ಅಡಗಿರುವ ಪದಲಾಲಿತ್ಯವನ್ನು ಕರ್ಣಾಟ ಭಾರತ ಕಥಾ ಮಂಜರಿಯಲ್ಲಿ ಗುರುತಿಸಬಹುದು ಎಂದು ಕುಮಾರವ್ಯಾಸ ಭಾರತವನ್ನು ಪ್ರಶಂಸಿದ್ದಾರೆ ಎಂದರು.