ಮೂಡಿಗೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಕೆಸರು ತುಂಬಿಕೊಂಡಿರುವುದು. 
ಚಿಕ್ಕಮಗಳೂರು

ಮೂಡಿಗೆರೆ ಪಟ್ಟಣದ ಎಲ್ಲ ರಸ್ತೆಗಳು ಕೆಸರುಮಯ

ಮೂಡಿಗೆರೆ: ಹಗಲು ವೇಳೆ ಕಟ್ಟಡ ತೆರವುಗೊಳಿಸುತ್ತಿರುವ ಕಾಮಗಾರಿಯ ಮಣ್ಣು ಸಾಗಿಸಿ ಪಟ್ಟಣದ ಜನನಿಬೀಡ ಪ್ರದೇಶವಾದ ಎಂ.ಜಿ.ರಸ್ತೆಯನ್ನು ಸಂಪೂರ್ಣ ಕೆಸರುಮಯ ಮಾಡಲಾಗಿದೆ.
ಪಟ್ಟಣದ ಎಂ.ಜಿ.ರಸ್ತೆಯಲ್ಲಿ 15 ದಿನದಿಂದ ಹಳೆ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಾಮಗಾರಿ ನಡೆಸುತ್ತಿರುವ ಸಂಸ್ಥೆ ನಾಲ್ಕೈದು ಟ್ರ್ಯಾಕ್ಟರ್ ಮೂಲಕ ಮಣ್ಣು ಸಾಗಿಸುತ್ತಿದ್ದಾರೆ. ಮಣ್ಣು ಹೊತ್ತ ಟ್ರ್ಯಾಕ್ಟರ್ ಎಂ.ಜಿ.ರಸ್ತೆ, ಅಜಾದ್ ರಸ್ತೆ, ಕೆ.ಎಂ.ರಸ್ತೆ ಮೂಲಕ ಸಾಗಿ ಮಣ್ಣು ಖಾಲಿ ಮಾಡಿ ಪೊಲೀಸ್ ಠಾಣೆ ಹಿಂಭಾಗದ ರಸ್ತೆ ಮೂಲಕ ಗೆಂಡೆಹಳ್ಳಿ ರಸ್ತೆಯಲ್ಲಿ ಮತ್ತೆ ಎಂ.ಜಿ.ರಸ್ತೆಗೆ ಸಂಚರಿಸುತ್ತಿರುವುದರಿಂದ ಈ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ. ಈ ಎಲ್ಲ ರಸ್ತೆಗಳು ಜನನಿಬಿಡ ಪ್ರದೇಶವಾಗಿರುವುದರಿಂದ ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನಗಳು ಹೆಚ್ಚಾಗಿ ಸಂಚಾರವಿರುವ ಈ ರಸ್ತೆಯಲ್ಲಿ ಉದ್ದಕ್ಕೂ ಕೆಸರು ತುಂಬಿಕೊಂಡಿದೆ. ಆಗಾಗ ತುಂತುರು ಮಳೆಯಾಗುತ್ತಿರುವುದರಿಂದ ಕೆಸರು ಇನ್ನಷ್ಟು ಹೆಚ್ಚಾಗುತ್ತಿದೆ. ಪಟ್ಟಣದ ಜನನಿಬೀಡ ಪ್ರದೇಶದಲ್ಲಿ ಕಟ್ಟಡ ತೆರವುಗೊಳಿಸುವವರು ರಾತ್ರಿ ವೇಳೆ ಮಣ್ಣು ಸಾಗಿಸಬೇಕು. ಬೆಳಿಗ್ಗೆ ಟ್ಯಾಂಕರ್ ಮೂಲಕ ನೀರು ಹಾಕಿ ರಸ್ತೆಯಲ್ಲಿ ಮೆತ್ತಿರುವ ಕೆಸರನ್ನು ಸ್ವಚ್ಛಗೊಳಿಸಬೇಕು. ಕಟ್ಟಡ ತೆರವುಗೊಳಿಸುತ್ತಿರುವ ಸಂಸ್ಥೆ ಇದನ್ನು ಪಾಲಿಸುತ್ತಿಲ್ಲ.
ಪಟ್ಟಣದ ಎಂ.ಜಿ.ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ರಸ್ತೆ ಗುಂಡಿಯಾಗಿರುವುದರಿಂದ ವಾಹನ ಸಂಚರಿಸುವಾಗ ಕೆಸರು ದಾರಿಯಲ್ಲಿ ಸಾಗುವವರ ಮೇಲೆ ಚಿಮ್ಮುತ್ತದೆ. ಅಂಗಡಿಗಳಿಗೆ ಖರೀದಿಗೆ ತೆರಳುವವರ ಕಾಲಿನಲ್ಲಿ ಕೆಸರು ಮೆತ್ತಿಕೊಳ್ಳುವುದರಿಂದ ವ್ಯಾಪಾರ ಮಳಿಗೆಗಳಲ್ಲಿ ಸಂಪೂರ್ಣ ಕೆಸರು ತುಂಬಿ ಹೋಗಿದೆ. ವರ್ತಕರು ಆಗಾಗ ಪಪಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ಸಾರ್ವಜನಿಕರ ಗೋಳನ್ನು ಕೇಳುತ್ತಿಲ್ಲ. ಇದು ವರ್ತಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ