ಅಜ್ಜಂಪುರ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಂತಿರುವುದು. 
ಚಿಕ್ಕಮಗಳೂರು

ಅಜ್ಜಂಪುರ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣ

ಪ್ರಮುಖ ಮುಖ್ಯಾಂಶಗಳು

  • ಪ್ಲಾಟ್‌ಫಾರ್ಮ್ ಇಲ್ಲದೆ ನಿಲುಗಡೆಗೆ ತೊಂದರೆ
  • ಕಿರಿದಾದ ಪ್ರದೇಶದಲ್ಲಿ ಹಲವು ಸಮಸ್ಯೆ
ಬಿ.ಉಮೇಶ್‌ನಾಯ್ಕ ತರೀಕೆರೆ
ಬಯಲುಸೀಮೆ ಭಾಗದ ಅಜ್ಜಂಪುರದಲ್ಲಿ ಕಿಷ್ಕಿಂಧೆಯಂಥ ಕೂಡು ರಸ್ತೆಗಳ ನಡುವೆಯೇ ಇರುವ ಖಾಸಗಿ ಬಸ್ ತಂಗುದಾಣ ಅವ್ಯವಸ್ಥೆಯ ಆಗರವಾಗಿದೆ.
ಚಿತ್ರದುರ್ಗ, ಹೊಸದುರ್ಗ, ಬೀರೂರು, ತರೀಕೆರೆ, ಶಿವಮೊಗ್ಗ, ಕಡೂರು, ಧರ್ಮಸ್ಥಳ, ಮಂಗಳೂರು, ಸಕಲೇಶಪುರ ಹಾಗೂ ಕುಕ್ಕೆ ಸುಬ್ರಹ್ಮಣ್ಯ, ಬುಕ್ಕಾಂಬುದಿ ಮೂಲಕ ಚನ್ನಗಿರಿ, ದಾವಣಗೆರೆ ಇತರ ಊರುಗಳಿಗೆ ಸುಗಮ ಸಂಚಾರದ ಸಂಪರ್ಕ ಕೊಂಡಿಯಂತಿರುವ ಅಜ್ಜಂಪುರದಲ್ಲಿ ಖಾಸಗಿ ಜತೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆ ಸಲುವಾಗಿ ನವೀಕರಿಸಿರುವ ಬಸ್ ನಿಲ್ದಾಣ ಇದ್ದರೂ ಇಲ್ಲದಂತಾಗಿದೆ. ಹಲವು ಕೊರತೆ ಕಾರಣ ಪ್ರಯಾಣಿಕರಷ್ಟೇ ಅಲ್ಲ, ವಾಹನ ಚಾಲಕರು ಸಹ ತಾಪತ್ರಯ ಅನುಭವಿಸುವಂತಾಗಿದೆ.
ಬಸ್ ನಿಲ್ದಾಣ ಆವರಣದಲ್ಲಿ ಆಗಮನ-ನಿರ್ಗಮನದ ಜತೆ ನಿಗದಿತ ಪ್ಲಾಟ್‌ಫಾರ್ಮ್ ವ್ಯವಸ್ಥೆ ಇಲ್ಲದ ಪರಿಣಾಮ ಸರದಿ ಸಾಲಿನಲ್ಲಿ ನಿಂತು ಆಯಾ ಮಾರ್ಗಕ್ಕೆ ಸಂಚರಿಸಬೇಕಾದ ಬಸ್‌ಗಳಿಗೂ ತೀವ್ರ ಸಮಸ್ಯೆಯಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡದ ಪರಿಣಾಮ ಅನೈರ್ಮಲ್ಯ ಕೂಡ ಎದ್ದು ಕಾಣುತ್ತಿದೆ. ನಿಲ್ದಾಣ ಅಕ್ಕಪಕ್ಕದ ಚರಂಡಿಯಿಂದ ಬೀರುತ್ತಿರುವ ದುರ್ನಾತ, ಬಸ್ಟ್ಯಾಂಡ್‌ನಿಂದ 3ನೇ ವಾರ್ಡ್‌ಗೆ ಹೋಗುವ ದಾರಿ ಸೇರಿ ಎಲ್ಲೆಂದರಲ್ಲಿ ಹರಡಿಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಗುಟ್ಖಾ ಪ್ಯಾಕೇಟ್‌ಗಳು, ಕಾಲಿಡಲೂ ಅಸಹ್ಯ ಪಡುವಂತಿರುವ ಗುಟ್ಖಾ ಜಗಿದು ತಂಗುದಾಣ ಆವರಣದಲ್ಲೇ ಉಗಿದಿರುವ ಉಗುಳು ಗಲೀಜಿನ ಗಂಭೀರತೆ ಪ್ರದರ್ಶಿಸುತ್ತಿದೆ.
ಸಮಯ ಬಂದಾಗ ಮಾತ್ರ ಸ್ವಚ್ಛತೆಯ ಘೋಷವಾಕ್ಯ ಸಾರಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುವ ಸ್ಥಳೀಯ ಆಡಳಿತ ಇನ್ನಾದರೂ ಸ್ವಚ್ಛತೆಗೆ ಆದ್ಯತೆ ನೀಡಿ ತಂಗುದಾಣದ ಸುತ್ತಮುತ್ತಲ ಪ್ರದೇಶ ಶುಚಿತ್ವಗೊಳಿಸುವುದಲ್ಲದೆ, ಪ್ರಯಾಣಿಕರ ಅನುಕೂಲದ ಜತೆ ಸುರಕ್ಷಕ್ಕೆ ಬೇಕಾದ ಕ್ರಮಕೈಗೊಳ್ಳಬೇಕು.
ಕಡಿಮೆ ವಿಸ್ತೀರ್ಣದಿಂದ ಕೂಡಿರುವ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಅಡ್ಡಾದಿಡ್ಡಿ ಬೈಕ್ ಪಾರ್ಕಿಂಗ್ ಮಾಡುವುದರಿಂದ ಎರಡಕ್ಕಿಂತ ಹೆಚ್ಚು ಬಸ್ ಏಕ ಕಾಲಕ್ಕೆ ಆಗಮಿಸಿದಾಗ ನಿಲುಗಡೆ ಮಾಡುವುದೇ ಕಷ್ಟವಾಗಿದೆ. ದಿನೇ ದಿನೆ ತಂಗುದಾಣ ಆವರಣದ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಸ್ ಚಾಲಕರು ಆಗಮನ-ನಿರ್ಗಮನದ ವೇಳೆ ಸ್ವಲ್ಪ ಎಚ್ಚರ ತಪ್ಪಿ ವಾಹನ ಚಲಾಯಿಸಿದರೆ ಡಿಕ್ಕಿ ಹೊಡೆದುಕೊಳ್ಳಲಿವೆ.  
ಪಟ್ಟಣ ಪಂಚಾಯಿತಿ ನಿರ್ಮಿಸಿ ನಿರ್ವಹಿಸುತ್ತಿರುವ ಖಾಸಗಿ ಬಸ್ ನಿಲ್ದಾಣ ಪ್ರವೇಶಕ್ಕೆ ಪರವಾನಗಿ ಪಡೆದ ಖಾಸಗಿ ಬಸ್ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ದಿನನಿತ್ಯ 20ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಅವಕಾಶ ಮುಕ್ತಗೊಳಿಸಲಾಗಿದೆ. ಈ ನಡುವೆ ನಿಲ್ದಾಣದೊಳಗೆ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೂ, ಖಾಸಗಿ ಬೈಕುಗಳು, ಕಾರುಗಳು ಪುಕ್ಕಟೆಯಾಗಿ ನಿಂತು ತೆರಿಗೆಯಿಂದ ಪೂರ್ಣ ವಿನಾಯಿತಿ ಪಡೆದುಕೊಳ್ಳುತ್ತಿವೆ.
ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ನಲ್ಲಿಯಲ್ಲಿ ಹನಿ ನೀರೂ ಇಲ್ಲದಂತಾಗಿದೆ. ತಂಗುದಾಣದಲ್ಲಿ ಬಸ್‌ಗಾಗಿ ಕಾದು ಕುಳಿತುಕೊಳ್ಳುವ ಪ್ರಯಾಣಿಕರು ಬಾಯಾರಿದಾಗ ಬಾಟಲ್ ನೀರಿ ಖರೀದಿಸಬೇಕು. ಇಲ್ಲದಿದ್ದರೆ ಹೋಟೆಲ್, ಕ್ಯಾಂಟೀನ್‌ಗಳಿಗೆ ಹೋಗಬೇಕು. 
ದಶಕದ ಹಿಂದೆ ಅಜ್ಜಂಪುರದ ಗಾಂಧಿ ವೃತ್ತದಿಂದ ರೈಲ್ವೆ ಲೆವಲ್ ಕ್ರಾಸಿಂಗ್‌ವರೆಗಿನ ರಸ್ತೆ ಚತುಷ್ಪಥಗೊಳಿಸುವ ಯೋಜನೆ ರೂಪಿಸಿದ್ದರೂ, ಜನಪ್ರತಿನಿಧಿಗಳ ಕಾರ್ಯ ಸಾಕಾರಗೊಳ್ಳದ ಕಾರಣ ಕಿರಿದಾದ ರಸ್ತೆಯಲ್ಲೇ ದ್ವಿಚಕ್ರ, ತ್ರಿಚಕ್ರ ವಾಹನಗಳಲ್ಲದೆ, ಲಾರಿ, ಬಸ್‌ಗಳಂಥ ಭಾರಿ ವಾಹನಗಳು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ. ಫೂಟ್‌ಪಾತ್ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ಸಾಗುವ ಪಾದಚಾರಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.
ಪಟ್ಟಣ ಪಂಚಾಯಿತಿ ನಿರ್ವಹಣೆ ಮಾಡುತ್ತಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದಿಂದ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೊಠಡಿ ನಿರ್ಮಿಸಿದ್ದು, ಈ ಕೊಠಡಿಗೆ ಬೀಗ ಹಾಕಲಾಗಿದೆ. ಕಂದಮ್ಮಗಳು ಹಸಿದಾಗ ಹಾಲು ಕುಡಿಸಲು ತಾಯಂದಿರು ಕೊಠಡಿಗಾಗಿ ಬೇರೆ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕಾಗಿದೆ. 
ಅಜ್ಜಂಪುರ ಪಟ್ಟಣ ಪಂಚಾಯಿತಿ ಸ್ವಚ್ಛ ಸರ್ವೇಕ್ಷಣ್ ನಿಯಮದಂತೆ ಖಾಸಗಿ ಬಸ್ಟ್ಯಾಂಡ್ ಪಕ್ಕದಲ್ಲಿ 3ನೇ ವಾರ್ಡಿಗೆ ಹಾದು ಹೋಗಿರುವ ದಾರಿಯಲ್ಲಿ ಕಸ ಎಸೆಯುವುದು, ಅನೈರ್ಮಲ್ಯಗೊಳಿಸುವುದು ಕಾನೂನು ಬಾಹಿರವಾಗಿದೆ. ಇಲ್ಲಿ ಗಲೀಜು ಮಾಡಿದಲ್ಲಿ ಅಂಥವರ ವಿರುದ್ಧ ಘನತ್ಯಾಜ್ಯ ನಿರ್ವಹಣೆ ನಿಯಮದನ್ವಯ ದಂಡ ವಿಧಿಸಲಾಗುವುದು ಎನ್ನುವ ಮಾಹಿತಿಯುಳ್ಳ ಫಲಕ ಅಳವಡಿಸಿದೆ. ಆದರೆ ಸ್ವಚ್ಛತೆಯ ಸಂದೇಶ ಸಾರುವಂತಿರುವ ಫಲಕದಡಿಯಲ್ಲೇ ಗುಟ್ಖಾ ಜಗಿದು ಉಗಿದಿರುವುದಲ್ಲದೆ, ಪ್ಲಾಸ್ಟಿಕ್ ಇತರ ತ್ಯಾಜ್ಯ ಹೆಚ್ಚು ಎಸೆದು ಅನೈರ್ಮಲ್ಯ ಸೃಷ್ಟಿಸಲಾಗಿದೆ. 
ಖಾಸಗಿ ಬಸ್ ನಿಲ್ದಾಣದ ತಂಗುದಾಣದಲ್ಲಿ ಪ್ರಯಾಣಿಕರು ಕೂರಲು ತಗಡಿನ ಮೇಲ್ಛಾವಣಿಯ ಶೆಲ್ಟರ್ ನಿರ್ಮಿಸಲಾಗಿದೆ. ಅಲ್ಲೂ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ. ತಂಗುದಾಣ ಪಕ್ಕದ ಜಾಗದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ಮಾರಾಟ ಆರಂಭಿಸಿ ಆ ಜಾಗ ಕೂಡ ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಮಾತ್ರವಲ್ಲ, ಸಂಚಾರ ಸಿಕ್ಕು ಸಹ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.