ಬುಕ್ಕಾಂಬುದಿ ಗ್ರಾಮದಲ್ಲಿ ಉದ್ಭವ ಗಣಪತಿ ದೇಗುಲ ಸಮೀಪದಲ್ಲಿರುವ ದೊಡ್ಡಕೆರೆ. 
ಚಿಕ್ಕಮಗಳೂರು

ಅಜ್ಜಂಪುರ ತಾಲೂಕಿಗೆ ದೇಗುಲ, ಧಾರ್ಮಿಕ ಕ್ಷೇತ್ರಗಳೇ ಶೋಭೆ

ಪ್ರಮುಖ ಮುಖ್ಯಾಂಶಗಳು

  • ಬಗ್ಗುವಳ್ಳಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಬೇಕು ವೇಗ
  • ಪ್ರವಾಸೋದ್ಯಮಕ್ಕೆ ಅವಕಾಶವಿದ್ದರೂ ಅಧಿಕಾರಿಗಳ ನಿರ್ಲಕ್ಷೃ
ತರೀಕೆರೆ: ಜಾನಪದ ಕಲೆ, ನೃತ್ಯ, ಸಂಗೀತಕ್ಕೆ ಹೆಸರಾಗಿರುವ ಅಜ್ಜಂಪುರ ತಾಲೂಕಿಗೆ ಸ್ಥಳೀಯ ಐತಿಹಾಸಿಕ ದೇಗುಲಗಳು, ಧಾರ್ಮಿಕ ಕ್ಷೇತ್ರಗಳು ಮತ್ತಷ್ಟು ಶೋಭೆ ತಂದಿವೆ.
ಬಗ್ಗವಳ್ಳಿಯ ಐತಿಹಾಸಿಕ ಶ್ರೀಯೋಗಾ ನರಸಿಂಹಸ್ವಾಮಿ ದೇಗುಲ, ಬುಕ್ಕಾಂಬುದಿ ಬೆಟ್ಟದ ತಪ್ಪಲಿನ ಉಜ್ಜಯಿನಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಜಗದ್ಗುರು ತಪೋಗೈದ ಪುಣ್ಯಕ್ಷೇತ್ರ. 12 ವರ್ಷಕ್ಕೊಮ್ಮೆ ವೈಭವದ ಜಾತ್ರೆ ನಡೆಯುವ ಸೊಲ್ಲಾಪುರದ ಶರಣರ ಕ್ಷೇತ್ರ ಶ್ರೀಗುರು ಸಿದ್ದರಾಮೇಶ್ವರ ದೇಗುಲ, ಭಕ್ತನಕಟ್ಟೆ ಶ್ರೀ ಜುಂಜಪ್ಪ ಸ್ವಾಮಿ ದೇಗುಲ, ಬುಕ್ಕಾಂಬುದಿಯ ಬುಕ್ಕರಾಯನ ಕೆರೆ ದಂಡೆಯಲ್ಲಿರುವ ಶ್ರೀ ವಿರೂಪಾಕ್ಷೇಶ್ವರ ಮತ್ತು ಉದ್ಭವ ಗಣಪತಿ ಆಲಯಗಳು ಆಕರ್ಷಣೀಯ ಧಾರ್ಮಿಕ ತಾಣಗಳಾಗಿವೆ.
ಇನ್ನೂ ಮೈಸೂರು ಅರಸರ ಕಾಲದಲ್ಲಿ ಅಮೃತ್ ಮಹಲ್ ರಾಸುಗಳ ತಳಿ ಸಂವರ್ಧನೆಗಾಗಿ ನೂರಾರು ಹೆಕ್ಟೇರ್ ಕಾವಲು ಭೂಮಿ ಮೀಸಲಿರಿಸಿ ಅಭಿವೃದ್ಧಿಪಡಿಸಿದ್ದ ಅಜ್ಜಂಪುರ ಅಮೃತ್‌ಮಹಲ್ ತಳಿ ಸಂವರ್ಧನಾ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷೃ, ಭೂಗಳ್ಳರ ಅತಿಕ್ರಮಣದಿಂದ ಅವಸಾನದತ್ತ ಮುಖಮಾಡಿದೆ.
ಜನಪ್ರತಿನಿಧಿಗಳು ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಭಕ್ತನಕಟ್ಟೆ ಶ್ರೀ ಜುಂಜಪ್ಪಸ್ವಾಮಿ ಸೇರಿ ಇನ್ನಿತರ ದೇಗುಲಗಳ ಸಮಗ್ರ ಅಭಿವೃದ್ಧಿ ಜತೆ ಅಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚು ಆಸಕ್ತಿ ತೋರಿದರೆ ಬಹುತೇಕ ಎಲ್ಲ ದೇವಾಲಯಗಳು ಅಧಿಕ ಭಕ್ತರನ್ನು ಆಕರ್ಷಿಸುವ ಮೂಲಕ ಸರ್ಕಾರಕ್ಕೂ ಹೆಚ್ಚಿನ ಆದಾಯ ತಂದುಕೊಡಲಿವೆ. ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಪುನಶ್ಚೇತನ, ಕಾವಲಿನ ರಾಸುಗಳ ಜತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನೀರುಣಿಸುವ ಪರ್ವತನರಾಯನ ಕೆರೆಗೆ ಹೊಸ ಸ್ಪರ್ಶ ನೀಡಿದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ಸಿಕ್ಕಂತಾಗಲಿದೆ. ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕಿದೆ.
ಅಜ್ಜಂಪುರ ತಾಲೂಕು ಗಡಿ ಭಾಗದಲ್ಲಿರುವ ಭಕ್ತನಕಟ್ಟೆ ಶ್ರೀ ಜುಂಜಪ್ಪಸ್ವಾಮಿ ದೇಗುಲ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆದರೆ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಯನ್ನು ಅಪೇಕ್ಷಿಸುತ್ತಿದೆ. ಮಳೆ, ಬಿಸಿಲಿನಲ್ಲಿ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಬಯಲು ಮರಗಳೇ ಆಶ್ರಯವಾಗಿದ್ದು, ನೆರಳಿಗೆ ಸಮುದಾಯ ಭವನ ನಿರ್ಮಾಣ ಅನಿವಾರ್ಯವಾಗಿದೆ. ಉಳಿದಂತೆ ಬುಕ್ಕಾಂಬುದಿ ಬುಕ್ಕರಾಯನ ಕೆರೆ ದಂಡೆ ಮೇಲಿನ ಹಂಪಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ದೇಗುಲ ಶಿಥಿಲಾವಸ್ಥೆಗೆ ತಲುಪಿದ್ದು, ಜೀರ್ಣೋದ್ಧಾರಕ್ಕೆ ಕಾಯುತ್ತಿದೆ.

ಇನ್ನೂ ಕೂಡಿಲ್ಲ ಯೋಗಾ

ಕಾಲದ ಹೊಡೆತಕ್ಕೆ ಸಿಲುಕಿ ಕಳೆಗುಂದಿದ ಬಗ್ಗವಳ್ಳಿಯಲ್ಲಿ ಹೊಯ್ಸಳರ ಕಾಲದ ಶ್ರೀಯೋಗಾ ನರಸಿಂಹಸ್ವಾಮಿ ದೇಗುಲ ನವೀಕರಣ ಕಾಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರ ಅಗತ್ಯ ಅನುದಾನ ನೀಡಿದರೂ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಯೋಗಾ ನರಸಿಂಹಸ್ವಾಮಿಗೆ ಹೊಸ ರೂಪ ಪಡೆಯುವ ಯೋಗ ಸಿಗದಂತಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಲುವಾಗಿ ಗ್ರಾಪಂ ಶೌಚಗೃಹ ನಿರ್ಮಿಸುವ ಯೋಜನೆ ರೂಪಿಸಿದೆ. ಆದರೆ ಅದಕ್ಕೆ ಮುಹೂರ್ತ ಕೂಡಿಬಂದಿಲ್ಲ.
ರೈತರ ಅನುಕೂಲಕ್ಕಾಗಿ ವಿಜಯನಗರದ ಅರಸ ಬುಕ್ಕರಾಯ ಬುಕ್ಕಾಂಬುದಿಗೆ ಸ್ವಲ್ಪ ದೂರದಲ್ಲಿ 250 ಹೆಕ್ಟರ್ ವಿಸ್ತೀರ್ಣದ ಕೆರೆ ನಿರ್ಮಿಸಿದ್ದ. ಬೀರೂರು-ದಾವಣಗೆರೆ ರಾಜ್ಯ ಹೆದ್ದಾರಿ ಬದಿಯಲ್ಲಿ ಸದಾ ನಳನಳಿಸುತ್ತಿರುವ ವಿಶಾಲವಾದ ಕೆರೆ ಸೂಕ್ತ ನಿರ್ವಹಣೆ ಇಲ್ಲದೆ ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ. ಸರ್ಕಾರ ಕೆರೆಯತ್ತ ಗಮನ ಹರಿಸಿ ಅಲ್ಲಿ ಬೋಟಿಂಗ್ ಇನ್ನಿತರ ಆಧುನಿಕ ಸೌಲಭ್ಯ, ಕೆರೆ ಸಮೀಪದ ಉದ್ಭವ ಗಣಪತಿ ದೇಗುಲ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಔಷಧ ಸಸ್ಯ ಬೆಳೆಸಿ ಆಕರ್ಷಣೀಯಗೊಳಿಸಿದರೆ ಈ ಪ್ರದೇಶ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಲಿದೆ.