ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ಮಾಜಿ ಸಚಿವ ಎಚ್.ಆಂಜನೇಯ ಅನಾವರಣಗೊಳಿಸಿದರು. ಬಿ.ಎನ್.ಚಂದ್ರಪ್ಪ, ಕೆ.ಎಸ್.ಆನಂದ್, ಶರತ್ ಕೃಷ್ಣಮೂರ್ತಿ ಮತ್ತಿತರರಿದ್ದರು.
ಕಡೂರು: ಸುದೀರ್ಘ ಇತಿಹಾಸವಿಲ್ಲದ ಮಾದಿಗ ಸಮಾಜವು ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ತಾಲೂಕಿನ ಗಡಿಭಾಗದ ಮರವಂಜಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಹಿಂದೆ ಮಾದಿಗ ಸಮಾಜವನ್ನು ಬಡತನ ಭಯಂಕರವಾಗಿ ಕಾಡುತ್ತಿತ್ತು. ಅದೆಷ್ಟೋ ಕುಟುಂಬಗಳು ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಸತ್ತ ಉದಾಹರಣೆಗಳಿವೆ. ಇದೀಗ ಸಮಾಜದ ಪರಿಸ್ಥಿತಿ ಬದಲಾಗಿದೆ. ಊಟ, ಬಟ್ಟೆಗೆ ಬರವಿಲ್ಲ. ಹಾಗಾಗಿ ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ನ್ಯಾಯಯುತವಾಗಿ ಮೀಸಲಾತಿ ದೊರೆಯದ ಸಮುದಾಯಕ್ಕೆ ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದನ್ನೇ ಮಾನದಂಡವಾಗಿಟ್ಟುಕೊಂಡ ಸಿದ್ದರಾಮಯ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದೆ. 15ಕ್ಕಿಂತ ಕಡಿಮೆ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಒಳ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ನಿಯಮವಿದೆ. ಈ ನ್ಯೂನ್ಯತೆಯನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕೇವಲ ಪಟ್ಟಣಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಕಾಣಬಹುದಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗವಾದ ಮರವಂಜಿಯಲ್ಲಿ ಎಲ್ಲ ಸಮುದಾಯದವರ ಸಹಕಾರದೊಂದಿಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದೆ. ಅಂಬೇಡ್ಕರ್ ಇಲ್ಲಿನ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಬೇಕು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಂಘಟನೆಯ ಹೆಸರಿನಲ್ಲಿ ದಲಿತ ಸಮುದಾಯಗಳು ಇತರ ಸಮುದಾಯಗಳ ಜತೆ ಸಂಘರ್ಷಕ್ಕೆ ಇಳಿಯಬಾರದು.ಇತರ ಸಮುದಾಯಗಳ ಜತೆ ಸಹಬಾಳ್ವೆ ನಡೆಸಬೇಕು. ಅಭಿವೃದ್ಧಿ ಹೊಂದಲು ಇತರ ಸಮುದಾಯಗಳ ಸಹಕಾರ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿ ಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಮುಖಂಡರಾದ ಶೂದ್ರ ಶ್ರೀನಿವಾಸ್, ಶೋಭಾ, ಹೋಚಿಹಳ್ಳಿ ಭೋಗಪ್ಪ, ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ, ಎಂ.ಕೆ.ರಂಗಪ್ಪ, ನರಸಿಂಹಪ್ಪ ಮತ್ತಿತರರಿದ್ದರು.