ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಆಶಾ ಕಾರ್ಯಕರ್ತೆಯರಿಗೆ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು. 
ಚಿಕ್ಕಮಗಳೂರು

ಕಾರ್ಯಕರ್ತೆಯರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಲಿ

ಎನ್.ಆರ್.ಪುರ: ಸಮಾಜದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಕಾಳಜಿವಹಿಸಬೇಕು ಎಂದು ಜೇಸಿ ವಲಯ 14ರ ವಲಯ ಕಾರ್ಯದರ್ಶಿ ಶೃತಿ ರೋಹಿತ್ ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರಿನ ಬಾಟಲ್ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಉಪನ್ಯಾಸ ನೀಡಿ, ಕೇವಲ ಗೌರವ ಧನ ಪಡೆಯುವ ಆಶಾ ಕಾರ್ಯಕರ್ತೆಯರು ವಾರ್ಡ್‌ಗಳು, ಗ್ರಾಮಗಳಲ್ಲಿ ಸುತ್ತಾಡಿ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಿಸುತ್ತಾರೆ. ಈ ಒತ್ತಡದ ಕೆಲಸದ ನಡುವೆ ತಮ್ಮ ಆರೋಗ್ಯ ನೋಡಿಕೊಳ್ಳಲು ಸಮಯ ಸಿಗುವುದಿಲ್ಲ. ಆಶಾ ಕಾರ್ಯಕರ್ತೆಯರು ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತ ಮಾತನಾಡಿ, ನಮ್ಮ ಆಹಾರ ವ್ಯತ್ಯಾಸದಿಂದ ಇತ್ತೀಚಿನ ದಿನಗಳಲ್ಲಿ ರೋಗ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆಯಿಂದ ವಿವಿಧ ಸಂಘ,ಸಂಸ್ಥೆಗಳ ಜತೆ ಸೇರಿ ಹಲವಾರು ಕಾರ್ಯಕ್ರಮ ರೂಪಿಸಲಾಗುತ್ತಿದೆ. 14 ವರ್ಷ ತುಂಬಿದ ಬಾಲಕಿಯರಿಗೆ ಕ್ಯಾನ್ಸರ್ ತಡೆಯುವ ಎಚ್‌ಪಿವಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೇಸಿ ವಲಯ 14ರ ಸಮುದಾಯ ಅಭಿವೃದ್ಧಿ ಅಧಿಕಾರಿ ಕೆ.ಎ.ಸುಜನ್ ಮಾತನಾಡಿ, ಜೇಸಿಯನ್ನು ಒಟ್ಟು 29 ವಲಯಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 1200 ಘಟಕಗಳಿವೆ. ದೇಶದಲ್ಲಿ ಈಗಾಗಲೇ 22 ಸಾವಿರ ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಿಸಲಾಗಿದೆ. ವಲಯ 14ರಲ್ಲಿ ಈಗಾಗಲೇ 1700 ಕುಡಿಯುವ ನೀರಿನ ಸ್ಟೀಲ್ ಬಾಟಲ್ ವಿತರಿಸಲಾಗಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ.ಬಿ.ಗೌಡ, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕ್ಷಮ, ಜೇಸಿ ಕಾರ್ಯದರ್ಶಿ ರಜತ್‌ವಗಡೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.