ಚಿಕ್ಕಮಗಳೂರು: ಒಳ್ಳೆಯ ಅಭ್ಯಾಸ, ಕ್ರಿಯಾಶೀಲತೆ, ಸಕಾರಾತ್ಮಕತೆ ಹಾಗೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರುದ್ರಪ್ಪ ಹೇಳಿದರು.
ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಯೋಜಿಸಿರುವ ಯುವಚೇತನ 2026-27 ಪ್ರತಿಭೋತ್ಸವ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಿ ಮೂಹರ್ತದಲ್ಲಿ ಮಾಡುವ ಎಲ್ಲ ಕೆಲಸ ಸಿದ್ಧಿಸುತ್ತದೆ. ವಿದ್ಯಾರ್ಥಿಗಳು ಬೆಳಗಿನಜಾವ ಓದು ಬರಹ ಅಭ್ಯಾಸ ಅಧ್ಯಯನಕ್ಕೆ ತೊಡಗಿಸಿಕೊಳ್ಳಬೇಕು. ಹಿಂದು ಸಂಪ್ರದಾಯದಲ್ಲಿ ಮುಂಜಾನೆಗೆ ವಿಶೇಷ ಮಹತ್ವವಿದೆ. ನೂತನ ದೇವಸ್ಥಾನದಲ್ಲಿ ದೇವರಿಗೆ ಶಕ್ತಿ ತುಂಬುವುದಾಗಲಿ, ಹೊಸಮನೆ ಪ್ರವೇಶವಾಗಲಿ ಬ್ರಾಹ್ಮಿಯೇ ಶ್ರೇಷ್ಠ. ಮುಸಲ್ಮಾನ್ ಬಾಂಧವರೂ ಬೆಳಗಿನ ಜಾವವೇ ಮೊದಲ ನಮಾಜ್ ಸಲ್ಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ ಎಂದರು.
ಒಂದು ವರ್ಷ ಪ್ರಪಂಚದಿಂದ ಕಣ್ಮರೆಯಾದರೆ ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು. ಕಣ್ಮರೆ ಎಂದರೆ ಫೇಸ್‌ಬುಕ್, ಟ್ವಿಟರ್, ಎಕ್ಸ್‌ಖಾತೆಗಳಿಂದ ದೂರವಿರುವುದು ಎಂದು ಅರ್ಥ. ಮನಸ್ಸು ಕೇವಲ ಗುರಿಯತ್ತ ಕೇಂದ್ರಿಕೃತವಾಗಬೇಕು. ಏಕಾಗ್ರತೆಯಿಂದ ಸಾಧನೆ ಸಾಧ್ಯ ಎಂದರು.
ಯುವಚೇತನ ಉಪಸಮಿತಿ ಅಧ್ಯಕ್ಷ ಮನೋಜ್ ಬೈಸಾನಿ ಮಾತನಾಡಿ, 35 ವರ್ಷಗಳಿಂದ ನಿರಂತರವಾಗಿ ಯುವಚೇತನ ಸಪ್ತಾಹವನ್ನು ಚಿಕ್ಕಮಗಳೂರು ರೋಟರಿ ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮ ಯುವಸಮೂಹದ ಮೆಚ್ಚುಗೆ ಗಳಿಸಿದೆ. ಪ್ರತಿ ವರ್ಷವೂ 15 ರಿಂದ 20 ಪ್ರೌಢಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸುಪ್ತಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಯುವಚೇತನ ಅತ್ಯುತ್ತಮ ವೇದಿಕೆ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ಸ್ಪರ್ಧೆಗಳ ಮೂಲಕ ಪ್ರತಿಭಾವಂತರನ್ನು ಗುರುತಿಸಲಾಗುತ್ತದೆ. ಶಿಸ್ತು, ಸಮಯಪ್ರಜ್ಞೆ, ತಂಡ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುವ ಜತೆಗೆ ನಾಯಕತ್ವದ ಗುಣ ಪ್ರತಿಭೋತ್ಸವ ಪ್ರೇರೇಪಿಸುತ್ತದೆ ಎಂದರು.
ತಮಾಷೆ, ಕಲಿಕೆ ಜೊತೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಯುವಚೇತನ ಪ್ರೇರಣೆ ನೀಡುತ್ತಿದೆ. ಇದು ಕೇವಲ ಸ್ಪರ್ಧೆ ಮಾತ್ರವಲ್ಲ ವಿದ್ಯಾರ್ಥಿಗಳ ಸಂಭ್ರಮೋತ್ಸವವೂ ಹೌದು. ಸ್ಪರ್ಧಾತ್ಮಕ ಮನೋಭಾವದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿ ದೊಡ್ಡ ಕನಸ್ಸನ್ನು ಸಾಕಾರಗೊಳಿಸುವ ಸಂದರ್ಭವಿದೆ ಎಂದು ನುಡಿದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಚಿದಾನಂದ ಮಾತನಾಡಿ, ಈ ಬಾರಿ ನಾಲ್ಕು ದಿನಗಳಲ್ಲಿ ಏಳು ವಿಧದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 21 ಪ್ರೌಢಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸ್ಪರ್ಧೆಗಳಿಗಾಗಿ ನೋಂದಾಯಿಸಿಕೊಂಡಿವೆ ಎಂದರು.
ರೋಟರಿ ವಲಯ ನಾಯಕ ಶ್ರೀವಾತ್ಸವ್ ಮಾತನಾಡಿ, ಸ್ಪರ್ಧೆಯಿಂದ ದೂರ ಉಳಿದರೆ ವಿಜೇತರಾಗಲು ಸಾಧ್ಯವಿಲ್ಲ. ಭಾಗವಹಿಸುವಿಕೆ ಅತಿಮುಖ್ಯ. ಆಸಕ್ತಿ ಇರುವ ವಿಷಯ ಗಮನಿಸಿ ಅದರಲ್ಲಿ ತರಬೇತಿ, ಅಭ್ಯಾಸ, ಪರಿಶ್ರಮ ಹಾಕಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರು ಕ್ಲಬ್ ಯುವ ಸೇವಾ ನಿರ್ದೇಶಕ ಡಿ.ಎಸ್.ಪವನ್ ಸಪ್ತಾಹದ ವಿವರಗಳನ್ನು ನೀಡಿದರು. ಸಹ ಅಧ್ಯಕ್ಷ ಅವಿನಾಶ್ ಬಿ.ಅವರೇಬೀಳು, ಕ್ಲಬ್ ನಿರ್ದೇಶಕ ಎಂ.ಎಲ್.ಸುಜಿತ್, ಎನ್.ಚಿದಾನಂದ, ಕಾರ್ಯದರ್ಶಿ ಕೆ.ಎಸ್.ಆದರ್ಶ ಇದ್ದರು.