ಕಳಸ-ಕೊಟ್ಟಿಗೆಹಾರ ಮಧ್ಯೆ ಕಳಸ ಸಮೀಪ ಗಂಗನಗುಡಿಗೆಯಲ್ಲಿ ರಸ್ತೆಗೆ ಮರ ಬಿದ್ದಿರುವುದು.
ಕಳಸ: ತಾಲೂಕಿನಾದ್ಯಂತ ಮುಂಗಾರು ಮಳೆ ನಿಧಾನವಾಗಿ ಚುರುಕುಗೊಳ್ಳುತ್ತಿದೆ. ಸೋಮವಾರ ಬೆಳಗ್ಗೆ ಆರಂಭವಾದ ಮಳೆ ಸಂಜೆ ವೇಳೆಗೆ ವಿರಾಮ ನೀಡಿದ್ದು, ರಾತ್ರಿಪೂರ್ತಿ ಬಿಡುವು ನೀಡಿತ್ತು. ಮಂಗಳವಾರ ಮಧ್ಯಾಹ್ನ ಮತ್ತೆ ಮಳೆ ಆರಂಭವಾಗಿ ಭರ್ಜರಿಯಾಗಿ ಸುರಿಯಿತು.
ಮಳೆ ಪರಿಣಾಮ ಕಳಸ-ಕೊಟ್ಟಿಗೆಹಾರ ಮುಖ್ಯರಸ್ತೆಯ ಗಂಗನಕುಡಿಗೆ ಬಳಿ ರಸ್ತೆಗೆ ದೊಡ್ಡ ಮರ ಬಿದ್ದು ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಮರ ವಿದ್ಯುತ್ ಕಂಬದ ಮೇಲೂ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಸ್ಥಳೀಯರು ಹಾಗೂ ಸಂಬಂಧಿತ ಇಲಾಖೆಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಸಂಚಾರ ಪುನಃ ಆರಂಭವಾಯಿತು. ಪ್ರತಿ ಮಳೆಗಾಲಕ್ಕೂ ಮುನ್ನ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂಥ ಸಮಸ್ಯೆಗಳು ಮರುಕಳಿಸುತ್ತಿವೆ ಎಂದು ಗ್ರಾಮಸ್ಥ ಲಿಂಗಪ್ಪ ಹಂತೂರು ಆರೋಪಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಳೆಯಿಂದ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಮುಂಗಾರು ಆರಂಭವಾಗಿ ಸುಮಾರು ಒಂದು ತಿಂಗಳ ಕಾಲ ಮಳೆ ಭಾರದೆ ಕೃಷಿಕರು ಆತಂಕದಲ್ಲಿದ್ದರು. ಇದೀಗ ಮಳೆ ಪುನರಾರಂಭವಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.