ಅಮೃತಾಪುರದಲ್ಲಿನ ಗ್ರಂಥಾಲಯ ಕಟ್ಟಡ.
ತರೀಕೆರೆ: ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗಿನ ಮಕ್ಕಳು ಬೇಸಿಗೆ ರಜೆಯ ಸಮಯವನ್ನು ವ್ಯರ್ಥಗೊಳಿಸದೆ ಕಲಿಕೆ ಜತೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವಂತೆ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಓದುವ ಬೆಳಕು ಎನ್ನುವ ಕಾರ್ಯಕ್ರಮದಡಿ ಸ್ವಯಂ ಸೃಷ್ಟಿಸಿರುವ ಬೇಸಿಗೆ-ಬೆಸುಗೆ ಶಿಬಿರ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.
ಜಿಲ್ಲೆಯ ಎಲ್ಲ ಗ್ರಾಪಂ ಗ್ರಂಥಾಲಯಗಳನ್ನು (ಅರಿವು ಕೇಂದ್ರ) ಸಕ್ರಿಯಗೊಳಿಸುವ ದಿಸೆಯಲ್ಲಿ ಪ್ರತಿ ಗ್ರಾಪಂಗಳ ಅರಿವು ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನ ಏ.10ರಿಂದ ಮೇ 29ರವರೆಗೆ ಬೇಸಿಗೆ-ಬೆಸುಗೆ ಶಿಬಿರ ಆಯೋಜಿಸಲು ತೀರ್ಮಾನಿಸಿರುವ ಜಿಪಂ ಸಿಇಒ, ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಉದ್ದೇಶಿತ ಕಾರ್ಯಕ್ರಮ ಸಾಕಾರಗೊಳಿಸಲು ಬೇಕಾದ ಸಿದ್ಧತೆ ಪೂರ್ಣಗೊಳಿಸಿದ್ದು ಚಾಲನೆಯೊಂದೇ ಬಾಕಿ ಉಳಿದಿದೆ.
ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆತರಲು ಆಯಾ ಗ್ರಂಥ ಪಾಲಕರು ಗ್ರಾಪಂ ವ್ಯಾಪ್ತಿಗೊಳಪಡುವ ಎಲ್ಲ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ತೆರಳಿ ಗ್ರಂಥಾಲಯಕ್ಕೆ ಬರುವ ಮಕ್ಕಳ ನೋಂದಣಿ ಮಾಡಿಕೊಳ್ಳಬೇಕು. ಗ್ರಂಥಾಲಯ ಕಾರ್ಯನಿರ್ವಹಿಸುವ ಸಮಯ, ಪುಸ್ತಕ ನೀಡಿ ಮರು ಪಡೆಯುವ ಕಾಲಾವಧಿ, ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ವಿವರ ಶಾಲಾ ಮಕ್ಕಳಿಗಷ್ಟೇ ಅಲ್ಲ, ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ಎಲ್ಲ ಮಕ್ಕಳಿಗೆ ನೀಡಬೇಕು. ಈ ಮಾಹಿತಿ ಮಕ್ಕಳಿಗೆ ನೀಡಿರುವುದನ್ನು ಸಿಆರ್‌ಪಿಗಳಿಂದ ಖಚಿತಪಡಿಸಿಕೊಂಡ ಬಳಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ (ಆಡಳಿತ) ವರದಿ ಸಲ್ಲಿಸಬೇಕು.