ತರೀಕೆರೆ ಕಂಬದಬೀದಿ ಸರ್ಕಾರಿ ಶಾಲೆ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಂ.ಬಿ.ರಾಮಚಂದ್ರಪ್ಪ, ಬಿ.ಎಂ.ಮುರುಗೇಶಪ್ಪ, ಕೆಂಚಪ್ಪ, ಶಿವಣ್ಣ, ಕಮಲಮ್ಮ, ವಿಶಾಲಾಕ್ಷಮ್ಮ ಇತರರಿದ್ದರು.
ತರೀಕೆರೆ: ಅನಾದಿಕಾಲದಿಂದಲೂ ಗುರು ಪರಂಪರೆ ಆಧರಿಸಿ ಗೌರವಿಸುತ್ತ ಬರಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಎಂ.ಬಿ.ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಕಂಬದಬೀದಿ ಸರ್ಕಾರಿ ಶಾಲೆಯಲ್ಲಿ 1999-2000ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳುವಂಥ ಶಿಕ್ಷಣ ನೀಡಿ ಮಾರ್ಗದರ್ಶಕರಾದರೆ ಆ ಸ್ಥಾನಕ್ಕೆ ಸಿಗುವ ಗೌರವ ಅಭೂತಪೂರ್ವವಾದುದು. ಮಕ್ಕಳು ಕಲಿಕಾ ಹಂತದಲ್ಲಿ ಶಿಕ್ಷಕರ ಪಾಠ ಪ್ರವಚನವಷ್ಟೇ ಅಲ್ಲ, ಹಿತ ನುಡಿ ಆಲಿಸಿ ಜೀವನ ಸುಂದರಗೊಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಗುರು ಶಿಷ್ಯರ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು. ನಿವೃತ್ತ ಶಿಕ್ಷಕ ಬಿ.ಎಂ.ಮುರುಗೇಶಪ್ಪ ಮಾತನಾಡಿ, ನಮ್ಮಿಂದ ವಿದ್ಯೆ ಕಲಿತ ಮಕ್ಕಳು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಅಲಂಕರಿಸಬೇಕೆಂದು ಎಲ್ಲ ಶಿಕ್ಷಕರು ಬಯಸುವುದು ಸಹಜ. ವಿದ್ಯಾರ್ಥಿಗಳು ಮೌಲ್ಯಯುತ ಬದುಕು ರೂಪಿಸಿಕೊಂಡಾಗ ಸೇವೆ ಸಾರ್ಥಕವೆನಿಸಲಿದೆ ಎಂದು ಹೇಳಿದರು.