ಕಡೂರಿನ ಸಣ್ಣೇನಹಳ್ಳಿ ಗ್ರಾಮದಲ್ಲಿ 94ಡಿಯಡಿ ಗ್ರಾಮದ ಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಿಸಲಾಯಿತು.
ಕಡೂರು: ಕ್ಷೇತ್ರದಲ್ಲಿನ 14,700 ಕುಟುಂಬಗಳಿಗೆ ಇ-ಸ್ವತ್ತು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 3 ಸಾವಿರ ಹಕ್ಕುಪತ್ರಗಳು ವಿತರಣೆಗೆ ಸಿದ್ದಗೊಂಡಿವೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಸಣ್ಣೇನಹಳ್ಳಿ ಗ್ರಾಮದಲ್ಲಿ ಸೋಮವಾರ ಭೂ ಗ್ಯಾರಂಟಿ ಯೋಜನೆಯಡಿ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮದ ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರ ಕಂದಾಯ ಇಲಾಖೆ ಮೂಲಕ ದಾಖಲೆ ರಹಿತ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡಲು 94ಡಿ ಅಡಿ ಮನೆ ಹಕ್ಕುಪತ್ರದ ಜತೆ ಇ-ಸ್ವತ್ತು ನೀಡುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿನ ಜನವಸತಿ ಪ್ರದೇಶಗಳ ದೊಡ್ಡ ಗ್ರಾಮಗಳು ಇಂದಿಗೂ ಕಂದಾಯ ಗ್ರಾಮಕ್ಕೆ ಒಳಪಡದೆ ಇರುವ ದಾಖಲೆ ರಹಿತವಾಗಿರುವುದನ್ನು ಗುರುತಿಸಿ 240 ಕಂದಾಯ ಮತ್ತು ಉಪಗ್ರಾಮಗಳನ್ನು ರಚಿಸಲಾಗಿದೆ. 131ಗ್ರಾಮಗಳನ್ನು ಪ್ರಸ್ತಾವನೆ ಹಂತದಲ್ಲಿದ್ದರೆ, 109 ಗ್ರಾಮಗಳಿಗೆ ಕಂದಾಯ ಗ್ರಾಮವಾಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಉಡುಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಣ್ಣೇನಹಳ್ಳಿ ಗ್ರಾಮದಲ್ಲಿನ ಬಹುತೇಕ ಜನರಿಗೆ ಈ ಹಿಂದೆ ದಾಖಲೆ ರಹಿತವಾಗಿ ಗುರುತಿಸಿಕೊಂಡಿದ್ದು, ಗ್ರಾಮದಲ್ಲಿನ 103 ಲಾನುಭವಿಗಳಲ್ಲಿ 89 ಮನೆಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಿಸಲಾಗುವುದು. ಉಳಿದ 12 ಲಾನುಭವಿಗಳಿಗೆ ತಾಂತ್ರಿಕ ತೊಡಕು ಉಂಟಾಗಿದ್ದು, ಲಾನುಭವಿಗಳು ಕಂದಾಯ ಬಾಕಿ ಪಾವತಿಸಿದರೆ ಕೂಡಲೇ ಹಕ್ಕುಪತ್ರ ಒದಗಿಸಲಾಗುವುದು. ಸಣ್ಣೇನಹಳ್ಳಿ ಗ್ರಾಮದಿಂದ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ದೊರಕಿಸಲಾಗಿದೆ ಎಂದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಉಮೇಶ್, ಮುಖಂಡರಾದ ರಂಗಪ್ಪ, ಹನುಮಂತಪ್ಪ, ರಾಮಕೃಷ್ಣ, ರೇವಣ್ಣ, ಕಂದಾಯ ನಿರೀಕ್ಷಕ ತಿಪ್ಪೇಶಪ್ಪ, ಪಿಡಿಒ ಕೆ.ಬಿ. ಚಂದ್ರಶೇಖರ್ ಇದ್ದರು.