ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಅರೆನೂರು ಬಳಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಒಂದು ದಿನ ಆಂಬುಲೆನ್ಸ್ನಲ್ಲಿಯೇ ನರಳಾಡಿದ ರವಿ. 
ಚಿಕ್ಕಮಗಳೂರು

ಒಂದು ದಿನ ಆಂಬುಲೆನ್ಸ್ನಲ್ಲೇ ನರಳಾಡಿದ ರೋಗಿ

ಪ್ರಮುಖ ಮುಖ್ಯಾಂಶಗಳು

  • ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡ ಯುವಕ
  • ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಮೇಲೂ ಗಂಭೀರ ಪ್ರಶ್ನೆ
ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬನಿಗೆ ಆಸ್ಪತ್ರೆಯಲ್ಲಿ ಬೆಡ್ ಹಾಗೂ ತುರ್ತು ಚಿಕಿತ್ಸೆಗೆ ವೈದ್ಯರು ಸಿಗದ ಹಿನ್ನೆಲೆ ಸುಮಾರು ೨೪ ಗಂಟೆಗಳ ಕಾಲ ಆಂಬುಲೆನ್ಸ್ನಲ್ಲೇ ನರಳಾಡಿದ ಆಘಾತಕಾರಿ ಘಟನೆ ಕಾಫಿನಾಡಿನಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಮೇಲೂ ಗಂಭೀರ ಪ್ರಶ್ನೆಗಳು ಎದ್ದಿವೆ.
ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪ ರವಿ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಆತನನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿ ಮಂಗಳೂರಿನ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಮಂಗಳೂರಿಗೆ ತೆರಳಿದ್ದಾರೆ.
ಮಂಗಳೂರಿಗೆ ತೆರಳಿದ ಕುಟುಂಬ ಅಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಸರ್ಜನ್ ಲಭ್ಯವಿಲ್ಲ ಎಂದು ಹೇಳಿ ರೋಗಿಯನ್ನು ದಾಖಲಿಸಿಕೊಳ್ಳಲಾಗಿಲ್ಲ ಎನ್ನಲಾಗಿದೆ. ಬಳಿಕ ಕುಟುಂಬಸ್ಥರು ಫಾದರ್ ಮುಲ್ಲಾ ಆಸ್ಪತ್ರೆಗೆ ತೆರಳಿದರೂ ಅಲ್ಲಿಯೂ ಬೆಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರ ನಂತರ ಮುಕ್ಕಾದಲ್ಲಿರುವ ಶ್ರೀನಿವಾಸ್ ಆಸ್ಪತ್ರೆಗೆ ತೆರಳಿದಾಗ ಚಿಕಿತ್ಸೆ ನೀಡಲು ಮುಂಗಡವಾಗಿ ೮೦ ಸಾವಿರ ರೂ. ಹಣ ಠೇವಣಿ ಇಡಬೇಕೆಂದು ಆಸ್ಪತ್ರೆ ಆಡಳಿತ ತಿಳಿಸಿದೆ ಎನ್ನಲಾಗಿದೆ.
ಗಾರೆ ಕೆಲಸ ಮಾಡಿ ಜೀವನ ಸಾಗಿಸುವ ಬಡ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತ ಒದಗಿಸುವುದು ಅಸಾಧ್ಯವಾಗಿದ್ದು, ಕೊನೆಗೆ ಅವರು ಮತ್ತೆ ಆಂಬುಲೆನ್ಸ್ನಲ್ಲೇ ಮಗನನ್ನು ಕರೆತಂದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಗ್ರಾಮದ ಸಮೀಪ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ಆಂಬುಲೆನ್ಸ್ನಲ್ಲೇ ನರಳುತ್ತಿದ್ದ ಯುವಕನನ್ನು ಕಂಡ ಸ್ಥಳೀಯ ಗ್ರಾಮಸ್ಥರು ಕುಟುಂಬಕ್ಕೆ ಧೈರ್ಯ ತುಂಬಿ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿ ಅಲ್ಲಿಗೆ ಕಳುಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಇದ್ದರೂ ಗಂಭೀರ ರೋಗಿಗಳನ್ನು ಇನ್ನೂ ಹೊರ ಜಿಲ್ಲೆಗಳ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿರುವುದು ಆರೋಗ್ಯ ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿತೋರಿಸಿದೆ. ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಜನರು ಎಲ್ಲಿಗೆ ಹೋಗಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಇಂತಹ ದುಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.