ಮೂಡಿಗೆರೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ.ಪ್ರಕಾಶ್ ಮಾತನಾಡಿದರು. ಎಂ.ಆರ್.ಯೋಗೇಶ್, ಕೆ.ವಿ.ರಾಜಶೇಖರ್, ಎ.ಎಂ.ಶರೀಫ್ ಹಾಜಿ, ಸಿ.ಕೆ.ಇಬ್ರಾಹಿಂ ಹಾಜಿ, ಮುಸ್ತಫಾ ಯಮನಿ ಇತರರಿದ್ದರು. 
ಚಿಕ್ಕಮಗಳೂರು

ಕಾನೂನಿನ ಅರಿವಿಲ್ಲದಿರುವುದೆ ಅಪರಾಧ ಪ್ರಕರಣ ಹೆಚ್ಚಾಗಲು ಕಾರಣ

ಪ್ರಮುಖ ಮುಖ್ಯಾಂಶಗಳು

  • ಮೂಡಿಗೆರೆ ಹಿರಿಯ ಸಿವಿಲ್ ನ್ಯಾಯಾಧೀಶ
  • ಪಿ.ಎಂ.ಪ್ರಕಾಶ್ ಹೇಳಿಕೆ
ಮೂಡಿಗೆರೆ: ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಕಾನೂನಿನ ಅರಿವಿಲ್ಲದಿರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬರೂ ಕಾನೂನಿನ ಅರಿವು ಮೂಡಿಸಿಕೊಂಡಲ್ಲಿ ಅಪರಾಧಗಳು ಕಡಿಮೆಯಾಗಲು ಸಾಧ್ಯವಿದೆ ಎಂದು ಮೂಡಿಗೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ.ಪ್ರಕಾಶ್ ತಿಳಿಸಿದರು.
ಈದ್ ಮಿಲಾದ್ ಹಬ್ಬದ ಅಂಗವಾಗಿ ಬದ್ರಿಯ್ಯೀನ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಮಾದಕ ವಸ್ತುಗಳ ಬಳಕೆ, ನಾಗರಿಕರ ಮೂಲಭೂತ ಹಕ್ಕುಗಳು-ಕರ್ತವ್ಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
ಮಕ್ಕಳ ಮೇಲೆ ಪಾಲಕರು ನಿಗಾ ಇರಿಸಬೇಕು. ಸಾಮಾಜಿಕ ಜಾಲತಾಣಗಳು ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿವೆ. ಪ್ರತಿಯೊಬ್ಬರೂ ಮೊಬೈಲ್ ಮೊರೆ ಹೋಗಿದ್ದಾರೆ. ಮಗು ಅಳಲು ಆರಂಭಿಸಿದ ತಕ್ಷಣ ಪಾಲಕರು ಮೊಬೈಲ್ ಕೊಟ್ಟು ಸುಮ್ಮನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊಬೈಲ್ ಬಳಕೆ ಅತಿಯಾಗಬಾರದು. ಮಕ್ಕಳು ಮೊಬೈಲ್ನಲ್ಲಿ ಏನನ್ನು ನೋಡುತ್ತಿದ್ದಾರೆ ಎಂಬುದನ್ನು ಪಾಲಕರು ಗಮನಿಸಿ ತಿಳಿವಳಿಕೆ ಹೇಳಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆ ಕಂಡುಬಂದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಅಥವಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಅಪರಾಧವೆಸಗಿ ಕಾನೂನಿನ ಕುಣಿಕೆಗೆ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ ಎಂದು ಎಚ್ಚರಿಕೆ ನೀಡಿದರು. 
ಮೂಡಿಗೆರೆ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ಜ್ಞಾನ ಒಬ್ಬ ವ್ಯಕ್ತಿಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಡಾ. ಎಪಿಜೆ ಅಬ್ದುಲ್ ಕಲಾಂ ಅವರೇ ಇದಕ್ಕೆ ನಿದರ್ಶನ ಎಂದರು.
ವೃತ್ತನಿರೀಕ್ಷಕ ಕೆ.ವಿ.ರಾಜಶೇಖರ್ ಮಾತನಾಡಿ, ಕಾನೂನು ಇರುವುದು ಜನರ ರಕ್ಷಣೆಗೆ. ಅದನ್ನು ಧಿಕ್ಕರಿಸಿದವರೇ ಕಷ್ಟಕ್ಕೆ ಸಿಲುಕುತ್ತಾರೆ. ಪಾಲಿಸಿದವರು ಸುರಕ್ಷಿತವಾಗಿರುತ್ತಾರೆ ಎಂದು ಹೇಳಿದರು. 
ಬದ್ರಿಯ್ಯಿನ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಂ.ರಾಘವೇಂದ್ರ, ವಕೀಲರಾದ ಬಿ.ಟಿ.ನಟರಾಜ್, ರಿಜ್ವಾನ್ ಅಲಿ, ಮಸೀದಿ ಖತೀಬ್ ಮುಸ್ತಾಫ ಯಮಾನಿ, ಸಿ.ಕೆ.ಇಬ್ರಾಹಿಂ ಹಾಜಿ, ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಹೈದರ್ ಜೀಯ ಇತರರಿದ್ದರು.