ಕಳಸ ಭದ್ರಾನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿರುವುದು. 
ಚಿಕ್ಕಮಗಳೂರು

ಮುಂಗಾರು ಮಳೆ ಸಂಭ್ರಮ ಹೆಚ್ಚಿಸುವ ಉಬ್ಬೆ ಮೀನು ಶಿಖಾರಿ

ಕಳಸ: ಮುಂಗಾರು ಮಳೆ ಆರಂಭ ಎಂದರೆ ಮಲೆನಾಡಿಗೆ ಹೊಸ ಜೀವ ಬಂದಂತಾಗುತ್ತದೆ. ಬೇಸಿಗೆ ಬಿಸಿಲಿಗೆ ಒಣಗಿ ಕಪ್ಪಾಗಿದ್ದ ಭೂಮಿ ಮೇಲೆ ಮೊದಲ ಮಳೆ ಹನಿಗಳು ಬೀಳುತ್ತಿದ್ದಂತೆ ಇಡೀ ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ರೈತರಿಗೆ ಕೃಷಿ ಚಟುವಟಿಕೆಗಳ ಸಂಭ್ರಮ ಆರಂಭವಾದರೆ, ಗ್ರಾಮೀಣ ಜನರಿಗೆ ಇದು ಮತ್ತೊಂದು ವಿಶೇಷ ಸಂಪ್ರದಾಯದ ಕಾಲ. ಅದೇ ಚಿಮ್ಮು ಮೀನು ಹಿಡಿಯುವುದು ಅಥವಾ ಉಬ್ಬೆ ಮೀನು ಶಿಖಾರಿ.
ಈ ಬಾರಿ ಸಕಾಲದಲ್ಲಿ ಸಮರ್ಪಕ ಮಳೆಯಾಗದ ಕಾರಣ ಈ ಸಂಪ್ರದಾಯಕ್ಕೂ ಹಿನ್ನಡೆಯಾಗಿದ್ದು, ಮೀನುಗಳ ಸಂತಾನೋತ್ಪತ್ತಿ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಮುಂಗಾರು ಮಳೆ ಚುರುಕಾಗುತ್ತಿದ್ದಂತೆ ಕಾಡಿನ ತೊರೆಗಳು, ಹಳ್ಳ ಮತ್ತು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಹೊಸ ನೀರಿನ ಹರಿವು ಮೀನುಗಳಿಗೆ ಸಂತಾನೋತ್ಪತ್ತಿಯ ಸಮಯ ಬಂದಿದೆ ಎಂಬ ಸಂಕೇತವಾಗಿರುತ್ತದೆ.
ನದಿ ಮತ್ತು ಕೆರೆಗಳ ಆಳದಲ್ಲಿರುವ ಮೀನುಗಳು ಮೊಟ್ಟೆಯಿಡಲು ಸುರಕ್ಷಿತ ಪ್ರದೇಶಗಳನ್ನು ಹುಡುಕುತ್ತಾ ನೀರಿನ ಹರಿವಿಗೆ ವಿರುದ್ಧವಾಗಿ ಈಜುತ್ತವೆ. ನದಿಗಳಿಂದ ಹಳ್ಳಗಳಿಗೆ, ಅಲ್ಲಿಂದ ಸಣ್ಣ ತೊರೆಗಳಿಗೆ, ಅಂತಿಮವಾಗಿ ಭತ್ತದ ಗದ್ದೆಗಳತ್ತ ಗುಂಪು ಗುಂಪಾಗಿ ವಲಸೆ ಬರುತ್ತವೆ. ಮೊದಲ ಮಳೆಗೆ ಕೆಸರಿನಿಂದ ತುಂಬುವ ಗದ್ದೆಗಳು ಹಾಗೂ ಹಳ್ಳಗಳಲ್ಲಿ ಮೀನುಗಳು ಕಾಣಿಸಿಕೊಳ್ಳುತ್ತಿದ್ದಂತೆ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ಕತ್ತಲಾಗುತ್ತಿದ್ದಂತೆ ಯುವಕರು ಹಾಗೂ ಹಿರಿಯರು ಕೈಯಲ್ಲಿ ಟಾರ್ಚ್, ತಲೆಗೆ ಪ್ಲಾಸ್ಟಿಕ್ ಮುಸುಕು, ಸೊಂಟಕ್ಕೆ ಬುಟ್ಟಿ ಅಥವಾ ಚೀಲ ಕಟ್ಟಿಕೊಂಡು ಮೀನು ಶಿಖಾರಿಗೆ ಹೊರಡುತ್ತಾರೆ. ಮಳೆ ಸುರಿಯುತ್ತಿರುವ ವೇಳೆ ಹಳ್ಳ ಅಥವಾ ಗದ್ದೆ ನೀರು ಹರಿಯುವ ಜಾಗದಲ್ಲಿ ಬ್ಯಾಟರಿ ಬೆಳಕನ್ನು ನೀರಿನ ಮೇಲೆ ಹರಿಸಿದಾಗ ಹೊಸ ನೀರಿನ ಮಂಪರಿನಲ್ಲಿ ಮೀನುಗಳು ಕ್ಷಣಕಾಲ ಬೆಳಕಿಗೆ ಬೆರಗಾಗಿ ನಿಶ್ಚಲವಾಗುತ್ತವೆ. ಈ ವೇಳೆ ಗ್ರಾಮಸ್ಥರು ಕೊಕ್ಕೆ ಅಥವಾ ಕತ್ತಿ ಬಳಸಿ ಮೀನುಗಳನ್ನು ಹಿಡಿಯುತ್ತಾರೆ. ಕೆಲವರು ನೀರು ಹರಿಯುವ ಕಿರಿದಾದ ದಾರಿಯಲ್ಲಿ ಬಿದಿರಿನಿಂದ ತಯಾರಿಸಿದ ಜಾಲರಿ ಅಥವಾ ಬುಟ್ಟಿಗಳನ್ನು ಅಡ್ಡಲಾಗಿ ಇಟ್ಟು ಮೀನುಗಳನ್ನು ಸುಲಭವಾಗಿ ಸೆರೆಹಿಡಿಯುತ್ತಾರೆ.

ಮೀನುಗಳ ಸಂಖ್ಯೆ ಕುಸಿಯುವ ಅತಂಕ

ಸೋಮವಾರ ಬೆಳಿಗ್ಗೆಯಿಂದ ಕಳಸ ಭಾಗದಲ್ಲಿ ಸುರಿದ ಮಳೆಯಿಂದ ಮೀನುಗಳು ಸಂತಾನೋತ್ಪತ್ತಿಗಾಗಿ ಭತ್ತದ ಗದ್ದೆಗಳತ್ತ ತೆರಳಿದ್ದವು. ಆದರೆ ಸಂಜೆ ನಂತರ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಗದ್ದೆಗಳಲ್ಲಿ ನೀರು ಇಳಿಮುಖವಾಯಿತು. ನೀರಿನ ಹರಿವು ಕಡಿಮೆಯಾಗಿದ್ದರಿಂದ ಗದ್ದೆಗಳಿಗೆ ತೆರಳಿದ್ದ ಅನೇಕ ಮೀನುಗಳಿಗೆ ಮರಳಿ ತೊರೆ ಹಾಗೂ ನದಿಗಳನ್ನು ಸೇರುವುದು ಸಾಧ್ಯವಾಗದೆ ಗದ್ದೆಗಳಲ್ಲೇ ಸಿಲುಕಿ ಒದ್ದಾಡಿ ಸಾವನ್ನಪ್ಪಿದವು. ಕೆಲವು ಕಡೆ ಗದ್ದೆಗಳಲ್ಲಿ ಸಿಲುಕಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದರು. ಮೀನುಗಳು ಗದ್ದೆಗಳು ಹಾಗೂ ತೊರೆಗಳಿಗೆ ತೆರಳುವ ಮುಖ್ಯ ಉದ್ದೇಶ ಸಂತಾನೋತ್ಪತ್ತಿ. ಆದರೆ ಸೂಕ್ತ ಪ್ರಮಾಣದಲ್ಲಿ ನೀರಿಲ್ಲದಿದ್ದರೆ ಅವುಗಳಿಗೆ ಮೊಟ್ಟೆಯಿಡಲು ಸಾಧ್ಯವಾಗುವುದಿಲ್ಲ. ಮೊಟ್ಟೆಯಿಟ್ಟ ಬಳಿಕವೂ ನೀರು ಬೇಗ ಬತ್ತಿದರೆ ಮೊಟ್ಟೆಗಳು ಹಾಗೂ ಹೊಸದಾಗಿ ಹೊರಬರುವ ಮರಿಗಳು ನೀರಿನ ಕೊರತೆಯಿಂದ ನಾಶವಾಗುತ್ತವೆ. ಇದರಿಂದ ಮುಂದಿನ ವರ್ಷಗಳಲ್ಲಿ ನದಿಗಳು ಹಾಗೂ ಹಳ್ಳಗಳಲ್ಲಿ ಮೀನುಗಳ ಸಂಖ್ಯೆ ಗಣನೀಯವಾಗಿ ಕುಸಿಯುವ ಆತಂಕ ಎದುರಾಗಿದೆ.

ಅಪರೂಪದ ಮೀನುಗಳು ನಾಶ

ಮಲೆನಾಡಿನ ಹಳ್ಳ-ಕೊಳ್ಳಗಳಲ್ಲಿ ಮಾತ್ರ ಕಂಡುಬರುವ ಹಲವು ಅಪರೂಪದ ಸ್ಥಳೀಯ ಮೀನು ತಳಿಗಳು ಸಂಪೂರ್ಣವಾಗಿ ಮುಂಗಾರು ಮಳೆಯನ್ನು ಅವಲಂಬಿಸಿವೆ. ಮಳೆ ಏರುಪೇರಿನಿಂದ ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಅಸ್ತವ್ಯಸ್ತವಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲವು ಸೂಕ್ಷ್ಮ ಹಾಗೂ ಅಪರೂಪದ ಮೀನು ತಳಿಗಳು ಶಾಶ್ವತವಾಗಿ ಅಳಿವಿನ ಅಂಚಿಗೆ ತಲುಪುವ ಅಪಾಯವಿದೆ. ಮುಂಗಾರು ಮಳೆ ಕೇವಲ ಕೃಷಿಗೆ ಮಾತ್ರವಲ್ಲ , ಮಲೆನಾಡಿನ ಜೀವವೈವಿಧ್ಯದ ಉಳಿವಿಗೂ ಮಹತ್ವದ್ದಾಗಿದೆ. ಹವಾಮಾನ ವೈಪರಿತ್ಯದಿಂದ ಉಂಟಾಗುತ್ತಿರುವ ಮಳೆ ಏರುಪೇರು ಸ್ಥಳೀಯ ಪರಿಸರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಕಥೆಯಾಗಿ ಉಳಿಯುವ ಅತಂಕ

ಮಲೆನಾಡಿನ ಜಾನಪದಕ್ಕೂ ಮತ್ತು ಮುಂಗಾರು ಮಳೆಯ ಉಬ್ಬೆ ಮೀನು ಶಿಖಾರಿಗೂ ಅವಿನಾಭಾವ ಸಂಬಂಧವಿದೆ. ಮೊದಲ ಮಳೆಗೆ ಹಳ್ಳಗಳು ತುಂಬಿದಾಗ ಇಡೀ ಊರೇ ಒಟ್ಟಾಗಿ ಸಾಂಪ್ರದಾಯಿಕ ಬಿದಿರಿನ ಜಾಲರಿ ಹಿಡಿದು ಹೊರಡುವುದು ನಮ್ಮ ಮಣ್ಣಿನ ಸೌಹಾರ್ದತೆಯ ಸಂಕೇತ. ಇದರ ಸುತ್ತ ನೂರಾರು ಜಾನಪದ ಹಾಡುಗಳು, ಒಗಟುಗಳು ಬೆಳೆದು ಬಂದಿವೆ. ಇದು ಬರೀ ಹವ್ಯಾಸವಲ್ಲ, ಪ್ರಕೃತಿಯ ಆಚರಣೆ ಎನ್ನುತ್ತಾರೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ರಜಿತ್ ಕೆಳಗೂರು. ಈ ಬಾರಿ ಮಳೆ ಕೊರತೆಯಿಂದ ಗದ್ದೆ, ತೊರೆಗಳಲ್ಲಿ ನೀರಿಲ್ಲದೆ ಮೀನುಗಳು ಸಾಯುತ್ತಿರುವುದು ನಮ್ಮ ಜೀವರಾಶಿಗೆ ಹಾಗೂ ಸಾಂಸ್ಕೃತಿಕ ಸೊಗಡಿಗೆ ಬಿದ್ದ ದೊಡ್ಡ ಪೆಟ್ಟು. ನಮ್ಮ ಹಿರಿಯರು ಮೀನುಗಳ ವಂಶಾಭಿವೃದ್ಧಿಗೆ ಧಕ್ಕೆಯಾಗದಂತೆ ಸಾಂಪ್ರದಾಯಿಕ ಬೇಟೆ ಆಡುತ್ತಿದ್ದರು. ಈಗ ಮಳೆ ಇಲ್ಲದೆ, ಅಪರೂಪದ ಮೀನಿನ ತಳಿಗಳು ನಾಶವಾಗುತ್ತಿರುವುದು ಆತಂಕದ ಸಂಗತಿ. ಹೀಗೆ ಮುಂದುವರಿದರೆ ಉಬ್ಬೆ ಶಿಖಾರಿ ಮುಂದಿನ ಪೀಳಿಗೆಗೆ ಕೇವಲ ಕಥೆಯಾಗಿ ಉಳಿಯಲಿದೆ.