ಆಲ್ದೂರು: ಟೆಂಪೋ ಟ್ರಾವೆಲ್ ವಾಹನ ಸ್ಕೂಟಿಗೆ ಡಿಕ್ಕಿಯಾಗಿ ಸೋಮವಾರ ಮೃತಪಟ್ಟಿದ್ದ ನವಮಿ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದು, ನೋವಿನಲ್ಲೂ ನವಮಿ ಕುಟುಂಬ ಸಾರ್ಥಕ್ಯ ಮೆರೆದಿದೆ. ಸೋಮವಾರ ಅಪಘಾತದಲ್ಲಿ ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ನವಮಿ (26) ಮೃತಪಟ್ಟಿದ್ದರು. ಒಬ್ಬಳೇ ಮಗಳನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ನಮ್ಮ ಬದುಕು ಶೂನ್ಯವಾಗಿದೆ ಎಂದು ನವಮಿ ತಾಯಿ ಅನ್ನಪೂರ್ಣ ಕಂಬನಿ ಮಿಡಿದರು.
ನವಮಿಯ ಪತಿ ವಿಕಾಸ್ ಮಾತನಾಡಿ, ಮಂಗಳವಾರ ನವಮಿಯ ಹುಟ್ಟುಹಬ್ಬವಿತ್ತು. ಸೋಮವಾರ ಗಣರಾಜ್ಯೋತ್ಸವ ಪ್ರಯುಕ್ತ ಸಂಘದಲ್ಲಿ ಧ್ವಜಾರೋಹಣ ನಡೆಸಿ ಕುಟುಂಬದವರೆಲ್ಲ ಹೊರನಾಡಿಗೆ ಹೋಗಲು ತೀರ್ಮಾನಿಸಿದ್ದೆವು. ಟಿಟಿ ಚಾಲಕನ ಅಜಾಗರೂಕತೆಯಿಂದ ನಮ್ಮ ಮನೆಯ ಬೆಳಕೇ ಆರಿಹೋಗಿದೆ ಎಂದರು.