ಬಾಲಕಿ ಮೇಲೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಶಿವಮೊಗ್ಗ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.
ತರೀಕೆರೆ: ತಾಲೂಕಿನ ಕುಡ್ಲೂರು ಸಮೀಪದ ನವಿಲುಕಲ್ಲು ಗುಡ್ಡ(Navilukallu hill) ಹಾಗೂ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿದ ಜಾಗಕ್ಕೆ ಶಿವಮೊಗ್ಗ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ವಿವಿಧ ವಲಯದ ಅರಣ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತರೀಕೆರೆ ಸಹಾಯಕ ಉಪ ಸಂರಕ್ಷಣಾಧಿಕಾರಿ, ಅಜ್ಜಂಪುರ ಮತ್ತು ತರೀಕೆರೆ ವಲಯಾರಣ್ಯ ಕಚೇರಿಯ ಆರ್‌ಎಫ್‌ಓ, ಉಪ ವಲಯಾರಣ್ಯಾಧಿಕಾರಿಗಳು ಸೇರಿ ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ 50ಕ್ಕೂ ಹೆಚ್ಚು ಸಿಬ್ಬಂದಿಗಳ ಪ್ರತ್ಯೇಕ ತಂಡ ರಚಿಸಿ ನವಿಲುಕಲ್ಲು ಗುಡ್ಡ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಸಿದರು.
ಹುಡುಕಾಟದ ವೇಳೆ ಚಿರತೆ ಚಲನವಲ ಎಲ್ಲೂ ಕಾಣಸಿಗದ ಹಿನ್ನೆಲೆಯಲ್ಲಿ ನವಿಲುಕಲ್ಲು ಗುಡ್ಡದ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು 7 ಬೋನುಗಳನ್ನು ಇರಿಸುವ ವ್ಯವಸ್ಥೆ ಮಾಡಿದರು. ಕಾಡಂಚಿನ ಜಮೀನಿನ ಕಡೆ ಪ್ರತಿದಿನ ಬೆಳಗ್ಗೆ ಸಂಜೆ ಹೊಲಗದ್ದೆಗಳಿಗೆ ತೆರಳುವ ರೈತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.
ಸಿಸಿಎಫ್ ನಿರ್ದೇಶನದಂತೆ ನವಿಲುಕಲ್ಲು ಗುಡ್ಡ ಸಮೀಪದ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನರಭಕ್ಷಕ ಚಿರತೆ ಜೀವಂತ ಸೆರೆ ಹಿಡಿಯುವ ಪ್ರಯತ್ನ ಮುಂದುವರೆಸಿದ್ದಾರೆ.
ಭದ್ರಾವತಿ ಡಿಎಫ್‌ಓ ರವೀಂದ್ರಕುಮಾರ್, ತರೀಕೆರೆ ಎಸಿಎಫ್ ಉಮರ್ ಬಾದ್ ಷಾ, ಆರ್‌ಎಫ್‌ಓ ಆಸೀಫ್ ಅಹಮದ್ ಸೇರಿ ವಿವಿಧ ವಿಭಾಗದ ಡಿಆರ್‌ಎಫ್‌ಓಗಳು, ಗಸ್ತಿನ ಅರಣ್ಯ ರಕ್ಷಕರು, ವೀಕ್ಷಕರು ಇದ್ದರು.