ಕಳಸ: ಶಿಥಿಲಗೊಂಡು ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದ ಕಳಸ-ಹೊರನಾಡು ರಸ್ತೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಶಾಸಕಿ ನಯನಾ ಮೋಟಮ್ಮ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ಹೊರನಾಡಿನಿಂದ ಬಾಳೂರು ಹ್ಯಾಂಡ್‌ಪೋಸ್ಟ್‌ವರೆಗೆ ಆಯ್ದ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಒಂದು ವರ್ಷದಿಂದ ಕಳಸ-ಹೊರನಾಡು ರಸ್ತೆಯ ಹಲವು ಭಾಗಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ಸ್ಥಳೀಯರು ಮಾತ್ರವಲ್ಲದೆ ಹೊರನಾಡು ಹಾಗೂ ಕಳಸಕ್ಕೆ ಆಗಮಿಸುವ ಪ್ರವಾಸಿಗರು, ವಾಹನ ಸವಾರರೂ ಸಮಸ್ಯೆ ಎದುರಿಸುವಂತಾಗಿತ್ತು.
ವಿಶೇಷವಾಗಿ ಕಳಸ ಮಂಜಿನಕಟ್ಟೆಯಿಂದ ಮಹಾವೀರ ವೃತ್ತದವರೆಗಿನ ರಸ್ತೆ ಗುಂಡಿಗಳಿಂದ ಕೂಡಿದ್ದು, ಈ ಮಾರ್ಗದಲ್ಲಿ ವಾಹನ ಪ್ರಯಾಣಿಕರಿಗೆ ಸಂಕಷ್ಟದಾಯಕವಾಗಿತ್ತು. ರಸ್ತೆ ದುರಸ್ತಿಗಾಗಿ ಸಾರ್ವಜನಿಕರಿಂದ ಹಲವು ಬಾರಿ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ 5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭಿಸಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನವೆಂಬರ್‌ನಲ್ಲಿ ಕುದುರೆಮುಖ ಎಸ್.ಕೆ.ಬಾರ್ಡರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಮುಖಂಡರಾದ ಕೆ.ಆರ್.ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ವೀರೇಂದ್ರ, ಾರೂಕ್, ಸುಜಿತ್ ಬೆಳ್ಳ, ಅಬ್ದುಲ್ ಶುಕುರ್, ಗಣೇಶ್ ಭಟ್, ಪ್ರೇಮಾ ಇತರರಿದ್ದರು.