ಗೋಣಿಬೀಡು ಸಮೀಪ ಕಳವು ಮಾಡಿದ ಕಾಫಿ ಬೀಜ
ಮೂಡಿಗೆರೆ: ಗೋಣಿಬೀಡು ಸಮೀಪದ ಸಾಲುಮರ ಸಮೀಪದ ಎಸ್ಟೇಟ್‌ನ ಗೋದಾಮಿನಲ್ಲಿ ಸಂಗ್ರಹಿಸಿದ್ದ ಕಾಫಿ ಬೀಜವನ್ನು ಕಳವು ಮಾಡಿದ ಆರೋಪಿಗಳನ್ನು ಮೂಡಿಗೆರೆ ಪೊಲೀಸರು 6 ಜನರನ್ನು ಬಂಧಿಸಿ, 15 ಚೀಲ ಕಾಫಿ ಬೀಜ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಕಲೇಶಪುರದ ನಿವಾಸಿಗಳಾದ ಕೌಶಿಕ್ (25), ಮನು (31), ಭರತ್ (28), ಗೌತಮ್ (40), ಶಿಶಿರ (23), ಶಂಕರ (22) ಸೇರಿದಂತೆ 6 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನವೆಂಬರ್ 30 ರಂದು ಬೆಳಗಿನ ಜಾವ 2.30ಕ್ಕೆ ಎಸ್ಟೇಟ್‌ನ ಗೋದಾಮಿನಿಂದ ತಲಾ 50 ಕೆಜಿಯ 10 ಚೀಲ ಅರೇಬಿಕ ಫಾರ್ಸಿಮೆಂಟ್, 5 ಚೀಲ ಚೆರ್ರಿ ಕಾಫಿ ಬೀಜವನ್ನು ಕಳವು ಮಾಡಲಾಗಿತ್ತು. ಡಿ.12 ರಂದು ತೋಟದ ಮಾಲೀಕ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಜಿ.ಆರ್.ರಂಗಸ್ವಾಮಿ ಅವರು ಗೋದಾಮಿನ ಸಿಸಿ ಟಿವಿ ಪುಟೇಜ್ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕೂಡಲೇ ಅವರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿದ ಕಾರ್ಯಚರಣೆ ನಡೆಸಿದ ಪೊಲೀಸರು ಜಿ.ಆರ್.ರಂಗಸ್ವಾಮಿ ಅವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕ ಸೇರಿ 5 ಜನರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಕೆ.ಆರ್.ನಾಗರಾಜ್, ಸಿಪಿಐ ಕೆ.ವಿ.ರಾಜಶೇಖರ್, ಪಿಎಪ್‌ಐಗಳಾದ ಎಚ್.ಕೆ.ಹರ್ಷವರ್ಧನ್, ಹೇಮಾ, ಸಿಬ್ಬಂದಿ ರಂಗೇಗೌಡ, ಸುನಿಲ್ ನಾಯ್ಕ, ಎ.ಎಸ್.ಸಚಿನ್, ಎಂ.ಸಿ.ಮಂಜುನಾಥ್ ಇದ್ದರು.