ಸಂಧ್ಯಾಸುರಕ್ಷಾ ಯೋಜನೆ  
ಚಿಕ್ಕಮಗಳೂರು

ಅಕ್ರಮ ಪಿಂಚಣಿ ಮಂಜೂರು ಮಾಡಿದ 11 ಅಧಿಕಾರಿಗಳು ನಾಪತ್ತೆ

ಕಡೂರು: ತಾಲೂಕಿನ ಕಸಬಾ ಹೋಬಳಿಯ 64 ಅನರ್ಹ ಫಲಾನುಭವಿಗಳಿಗೆ 9 ಲಕ್ಷ ರೂಪಾಯಿ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿದ 11 ನೌಕರರ ವಿರುದ್ಧ ತಹಸೀಲ್ದಾರರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದಾರೆ.
ಕಡೂರು ತಾಲೂಕು ಕಚೇರಿಯಲ್ಲಿ ಈ ಹಿಂದೆ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸಿದ್ದ ಬಿ.ಸಿ.ಕಲ್ಮರುಡಪ್ಪ, ದ್ವಿತೀಯ ದರ್ಜೆ ಸಹಾಯಕ ಪಿ.ಗಿರೀಶ್, ಕಸಬಾ ನಿರೀಕ್ಷಕ ಪಿ.ಆರ್.ರವಿಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಆರ್.ಹನುಮಂತಪ್ಪ, ಟಿ.ಎಂ.ಕಾವ್ಯಾ, ಜಿ.ಎಂ.ಕುಮಾರ, ಕೆ.ಲಿಂಗರಾಜು, ಕೆ.ಆರ್.ರವಿ, ಎಸ್.ಎಂ.ಚನ್ನಬಸಯ್ಯ, ಟಿ.ಎಸ್.ನಿರ್ಮಲಾ, ಎಸ್.ರವಿಚಂದ್ರ ವಿರುದ್ಧ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಪ್ರಕರಣ ದಾಖಲಿಸಿದ್ದಾರೆ.
ಎನ್‌ಕೆ ತಂತ್ರಾಂಶದಡಿ ಸಂಧ್ಯಾಸುರಕ್ಷಾ ಯೋಜನೆ ಪಡೆಯಲು 2023ರ ಸೆಪ್ಟೆಂಬರ್‌ನಿಂದ 2024ರ ಜೂನ್ ಅವಧಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಫಲಾನುಭವಿಗಳಲ್ಲದ ಮಧ್ಯ ವಯಸ್ಸಿನ 64 ಅನರ್ಹರ ಅರ್ಜಿ ಸ್ವೀಕರಿಸಿ ಅಕ್ರಮವಾಗಿ ಪಿಂಚಣಿ ಮಂಜೂರು ಮಾಡಿ ಆರ್ಥಿಕ ನಷ್ಟ ಉಂಟುಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಈ ಹಿಂದೆ ತಾಲೂಕು ಕಚೇರಿಯಿಂದ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದ ಪರಿಣಾಮ ಆರೋಪಿ ನೌಕರರ ವಿರುದ್ಧ ಮೊಕದ್ದಮೆ ದಾಖಲಿಸಿ ಆರ್ಥಿಕ ನಷ್ಟದ ಮೊತ್ತವನ್ನು ಸರ್ಕಾರದ ಬೊಕ್ಕಸಕ್ಕೆ ಮರುಪಾವತಿ ಮಾಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, 11 ಆರೋಪಿ ನೌಕರರು ನಾಪತ್ತೆಯಾಗಿದ್ದಾರೆ.