ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಿರುಗುಂದ ಪರಿಶಿಷ್ಟ ಕಾಲನಿಯಲ್ಲಿ ನೂರಾರು ವರ್ಷಗಳಿಂದ ಮನೆಕಟ್ಟಿ ವಾಸಿಸುತ್ತಿರುವ ಕುಟುಂಬಗಳ ಪಡಿತರ ಚೀಟಿ ಪರಿಗಣಿಸಿ, ಯಜಮಾನತಿ ಹೆಸರಿಗೆ ಇ-ಸ್ವತ್ತು ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲು ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ತಾಪಂ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಎಕೆ ಕಾಲನಿ ಸರ್ವೆ ನಂ.95ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 85 ಕುಟುಂಬಗಳು ಹಲವು ವರ್ಷಗಳಿಂದ ವಾಸವಿದ್ದಾರೆ. ಆದರೆ ಈ ಜಾಗ ಪಹಣಿಯಲ್ಲಿ ಎಕೆ ಕಾಲನಿ ಎಂದೇ ನಮೂದಾಗಿರುವುದರಿಂದ ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದನ್ನು ತಿದ್ದುಪಡಿ ಮಾಡಲು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸಿದಾಗ 0.4 ಎಕರೆ ಎಕೆ ಕಾಲನಿ ಎಂದು ದಾಖಲಾಗಿತ್ತು. ಆಶ್ರಯ ನಿವೇಶನ ಎಂದು ತಿದ್ದುಪಡಿ ಮಾಡಲು ಕೂಡ ಅವಕಾಶವಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ ಎಂದು ಹಿಂದಿನ ಸಭೆಯಲ್ಲಿ ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ ವಿಷಯ ಪ್ರಸ್ತಾಪಿಸಿದ್ದರು. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಸಕ್ಷಮ ಪ್ರಾಧಿಕಾರ ಮತ್ತು ತಹಸೀಲ್ದಾರ್ಗೆ ಪತ್ರ ಬರೆದ ಹಿನ್ನೆಲೆ ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಯಿತು.
ತಾಪಂ ಸಿಬ್ಬಂದಿ ಸೈಯದ್ ಸುಹಿಲ್ ಮಾತನಾಡಿ, 1959-60ರಲ್ಲಿ ಎಕೆ ಕಾಲನಿ ಎಂದು ನಿರ್ದಿಷ್ಟವಾಗಿ ನಮೂದಾಗಿರುವುದರಿಂದ ಎಂಆರ್ ರದ್ದುಪಡಿಸಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸಿ ಎಂದು ಹೇಳಲಾಗಿದೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿರುವುದರಿಂದ ಆಶ್ರಯ ನಿವೇಶನದಲ್ಲಿ ಹಕ್ಕುಪತ್ರ ನೀಡುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.