ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರು ಮುಖ್ಯ ರಸ್ತೆ ಅಭಿವೃದ್ಧಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಎಸ್.ದತ್ತೇಶ್‌ಕುಮಾರ್, ಗುರುಮಲ್ಲಪ್ಪ, ಶಿವರುದ್ರ, ಮಂಜೇಶ್, ಬಸವರಾಜು ಇತರರು ಇದ್ದರು.  
ಜಿಲ್ಲೆ

ಚಿಕ್ಕಲ್ಲೂರು ಮುಖ್ಯ ರಸ್ತೆ ಕಾಮಗಾರಿಗೆ ಚಾಲನೆ

ಶಿವಶಂಕರ್ ಎಂ. ಹೆಬ್ಬಳ್ಳ

ಕೊಳ್ಳೇಗಾಲ : ಬಹು ನಿರೀಕ್ಷಿತ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರು ಮುಖ್ಯ ರಸ್ತೆಯ ಅಭಿವೃದ್ಧಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಿದರು.

ದೊಡ್ಡಿಂದುವಾಡಿ ಗ್ರಾಮದ ಬಳಿ ಸೋಮವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 25 ಕೋಟಿ ರೂ. ಅನುದಾನದಲ್ಲಿ ಚಿಕ್ಕಲ್ಲೂರು ಮುಖ್ಯರಸ್ತೆ ಮಾರ್ಗದ ಮೊಡಳ್ಳಿಯಿಂದ ಕೊತ್ತನೂರು ವರೆಗಿನ (ಸುಮಾರು 7 ಕಿ.ಮೀ) ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.

ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ರಸ್ತೆಯ ಅಭಿವೃದ್ಧಿಗೆ ಇಂದು ಅವಕಾಶ ದೊರೆತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡುವಂತೆ ಸೂಚನೆ ನೀಡಿದರು.

ಚಿಕ್ಕಲ್ಲೂರು ರಸ್ತೆಗೆ ಅಭಿವೃದ್ಧಿ ಭಾಗ್ಯ : ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಚಿಕ್ಕಲ್ಲೂರು ರಸ್ತೆಗೆ ಇಂದು ಅಭಿವೃದ್ಧಿ ಭಾಗ್ಯ ದೊರೆತಿದೆ. ಪ್ರತಿ ವರ್ಷ ನಡೆಯುವ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಸ್ವಾಮಿಯ 5 ದಿನದ ಜಾತ್ರೆಗೆ 5 ಲಕ್ಷಕ್ಕೂ ಮೀರಿದ ಜನರು ಆಗಮಿಸುತ್ತಿದ್ದರು. ಈ ವೇಳೆ ಗುಂಡಿ ಬಿದ್ದ ರಸ್ತೆ, ಧೂಳಿನಿಂದ ಜನರು ಹಿಡಿ ಶಾಪ ಹಾಕುತ್ತಿದ್ದರು. ಈ ಮಾರ್ಗದಲ್ಲಿ ಸಿಗುವ ದೊಡ್ಡಿಂದುವಾಡಿ, ಇಕ್ಕಡಹಳ್ಳಿ, ಮತ್ತಿಪುರ, ಮೊಳಗನಕಟ್ಟೆ, ಕೊತ್ತನೂರು, ತೆಳ್ಳನೂರು ಇತ್ಯಾದಿ ಗ್ರಾಮದ ಜನರು ಜನಪ್ರತಿನಿಧಿಗಳನ್ನು ರಸ್ತೆಯ ಅಭಿವೃದ್ಧಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಬಹು ಬೇಡಿಕೆಯಿದ್ದ ಚಿಕ್ಕಲ್ಲೂರು ರಸ್ತೆಯ ಅಭಿವೃದ್ಧಿಗೆ ಚಾಲನೆ ದೊರೆತಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಎಸ್.ದತ್ತೇಶ್ ಕುಮಾರ್, ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ದೊಡ್ಡಿಂದುವಾಡಿ ಗ್ರಾ.ಪಂ. ಅಧ್ಯಕ್ಷ ಶಿವರುದ್ರ, ಸದಸ್ಯರು, ಜೆಡಿಎಸ್ ಮುಖಂಡ ಬಸವರಾಜು ಹಾಗೂ ವಿವಿಧ ಗ್ರಾಮಗಳ ಮುಖಂಡರಿದ್ದರು.