ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ಜಾತ್ರೆ ಜ.10ರಿಂದ ಜ.14ರ ವರೆಗೆ 5 ದಿನಗಳ ಕಾಲ ನಡೆಯುವ ಹಿನ್ನೆಲೆ ಜಾತ್ರಾ ಸಿದ್ಧತೆ ಭರದಿಂದ ಸಾಗಿದೆ.
ಜಾತ್ರಾ ಆವರಣದಲ್ಲಿ ವ್ಯಾಪಾರ ವಹಿವಾಟು ಆರಂಭಿಸಲು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವರ್ತಕರು, ಈಗಾಗಲೇ ನಿಗದಿಗೊಳಿಸಿರುವ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿದ್ದಾರೆ.
ತೆಳ್ಳನೂರು ಗ್ರಾಪಂ ಆಡಳಿತಕ್ಕೆ ಸೇರಿದ ಸ್ಥಳಗಳಲ್ಲಿ ಹೋಟೆಲ್ ವ್ಯಾಪಾರಸ್ಥರು ಇಂದಿನಿಂದಲೇ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದು, ಮಿಠಾಯಿ ವ್ಯಾಪಾರಿಗಳು, ಮಕ್ಕಳ ಆಟಿಕೆ ಸಾಮಗ್ರಿ ಹಾಗೂ ಕೃಷಿ ಉಪಕರಣ ಮಾರಾಟ ಮಳಿಗೆ ನಿರ್ಮಾಣಗೊಂಡಿವೆ.
ಶ್ರೀಸ್ವಾಮಿ ದೇಗುಲ, ಸಿದ್ದಪ್ಪಾಜಿ ಹಳೇ ಮಠಗಳಿಗೆ ಸುಣ್ಣ, ಬಣ್ಣ ಬಳಿಸಿರುವ ಹಿನ್ನೆಲೆ ದೇಗುಲ ಕಂಗೊಳಿಸುತ್ತಿದೆ.
ಹಳೇ ಮಠಾಧ್ಯಕ್ಷ ಬಿ.ಎಲ್.ಪ್ರಭುದೇವರಾಜೇ ಅರಸ್ ಹಾಗೂ ದೇವಸ್ಥಾನದ ನಿರ್ಗಮಿತ ವ್ಯವಸ್ಥಾಪಕ ಬಸವರಾಜು ನಡುವಿನ ಶೀತಲ ಸಮರದ ಹಿನ್ನೆಲೆ ದೇಗುಲದ ಆವರಣದಲ್ಲಿ ಅಗೆಯಲಾಗಿದ್ದ ಪಡಸಾಲೆ ನಿರ್ಮಾಣ ಕಾಮಗಾರಿ ಭರದಿಂದ ಮರು ನಿರ್ಮಾಣಗೊಳ್ಳುತ್ತಿದ್ದು, ಜಾತ್ರೆ ಆರಂಭದ ವೇಳೆಗೆ ಮುಕ್ತಾಯಗೊಳ್ಳುವ ಲಕ್ಷಣ ಕಂಡುಬಂದಿದೆ.
ಹಳೇ ಮಠ ಆಡಳಿತದಿಂದ ದೇವಾಲಯ ಸೇರಿದಂತೆ ಜಾತ್ರಾ ಆವರಣದ ಆಯ್ದ ಭಾಗಗಳಲ್ಲಿ ಜಿಲ್ಲಾಡಳಿತದ ಸೂಚನೆಯಂತೆ 10 ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಶುರುವಾಗಿದ್ದು, 30 ಕಡೆಗಳಲ್ಲಿ ತಾತ್ಕಾಲಿಕ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ 8 ಕಡೆಗಳಲ್ಲಿ ಬೋರ್‌ವೆಲ್ ದುರಸ್ತಿಗೊಳಿಸಲಾಗಿದೆ. ದೇಗುಲದ ಹಿಂಭಾಗದಲ್ಲಿ ಮುಡಿ ಕೇಂದ್ರ ತೆರೆಯಲಾಗಿದೆಯಲ್ಲದೆ, ವಿವಿಧೆಡೆಯಿಂದ 40 ಕ್ಷೌರಿಕರನ್ನು ಕರೆಸಲಾಗಿದ್ದು, ಮುಡಿ ತೆಗೆಯುವರಿಗೆ 30 ರೂ.ಹಾಗೂ ಟಿಕೆಟ್‌ಗೆ 60 ರೂ ನಿಗದಿಗೊಳಿಸಲಾಗಿದೆ.
150 ಬಸ್, ದರ 40: ಕೊಳ್ಳೇಗಾಲ ಪಟ್ಟಣದಿಂದ ಚಿಕ್ಕಲ್ಲೂರು ಜಾತ್ರೆಗೆ ಜ. 9 ರಿಂದ ಜ.15ರ ವರೆಗೆ ಕೊಳ್ಳೇಗಾಲ ರಸ್ತೆ ಸಾರಿಗೆ ಘಟಕದಿಂದ ಈ ಬಾರಿ 150 ವಿಶೇಷ ಬಸ್ ಬಿಡಲು ಸಿದ್ಧತೆ ನಡೆಸಲಾಗಿದ್ದು, ಈ ಹಿಂದಿನಂತೆ ಪ್ರಯಾಣ ದರವನ್ನು 40 ರೂ.ಗೆ ನಿಗದಿಗೊಳಿಸಲಾಗಿದೆ. ಈ ಬಾರಿ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಬಂದೋಗುವುದರಿಂದ ಚಿಕ್ಕಲ್ಲೂರು ಜಾತ್ರೆಯಲ್ಲಿ ಬಸ್ ಹತ್ತಲು ಕ್ಯೂ ಸಿಸ್ಟಂ ವ್ಯವಸ್ಥೆ ಜಾರಿಗೊಳಿಸಲು ಕೆರ್ಸ್ಸಾಟಿಸಿ ಡಿಪೋ ವ್ಯವಸ್ಥಾಪಕ ಬಿ.ಟಿ.ಸುಬ್ರಹ್ಮಣ್ಯ ನಿರ್ಧರಿಸಿದ್ದಾರೆ. ಕೊಳ್ಳೇಗಾಲ ಪಟ್ಟಣದಿಂದ ಜಾತ್ರೆಗೆ 130 ಬಸ್ ಸಂಚರಿಸಿದರೆ, ಮಳವಳ್ಳಿ ಪಟ್ಟಣದಿಂದ 20 ಬಸ್ ಸಂಚರಿಸಲಿವೆ.
ಜಾತ್ರಾ ಕಾರ್ಯಕ್ರಮಗಳು: ಪವಾಡ ಪುರುಷ ಶ್ರೀಸಿದ್ದಪ್ಪಾಜಿ ಜಾತ್ರೆ ಜ.10 ರಂದು ಚಂದ್ರಮಂಡಲೋತ್ಸವ ಪೂಜಾ ಕೈಂಕರ್ಯಗಳೊಂದಿಗೆ ಗರಿಗೆದರಲಿದೆ. ಅಂದು ರಾತ್ರಿ 10.30 ಗಂಟೆಗೆ ದೇವಸ್ಥಾನದ ಮುಂದೆ ಆಯೋಜಿಸುವ ಚಂದ್ರಮಂಡಲೋತ್ಸವ ಪೂಜಾ ಕೈಂಕರ್ಯದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಸಂಖ್ಯೆಯ ಭಕ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಜ.11ರಂದು ಹುಲಿವಾಹನೋತ್ಸವ, ಜ.12ರಂದು ರುದ್ರಾಕ್ಷಿ ಮಂಟಪೋತ್ಸವ(ಮುಡಿಸೇವೆ), ಜ.13ರಂದು ಗಜ ವಾಹನೋತ್ಸವ(ಪಂಕ್ತಿಸೇವೆ) ಹಾಗೂ ಜ.14 ರಂದು ಮುತ್ತುರಾಯರ ಸೇವೆಯೊಂದಿಗೆ ಜಾತ್ರೆ ತೆರೆಕಾಣಲಿದೆ.