ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಡಾ ಕೆ.ಸುಧಾಕರ್ ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮತ್ತಿತರರು ಇದ್ದರು. 
ಜಿಲ್ಲೆ

ಮಹಿಳೆಯರ ಸಬಲೀಕರಣಕ್ಕಾಗಿ ಸಾಲ: ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿಕೆ

ಚಿಕ್ಕಬಳ್ಳಾಪುರ: ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.


ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಕೈಗೊಂಡಿದ್ದ ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಬ್ಯಾಂಕ್‌ಗಳು ಯಾವುದೇ ಉದ್ದಿಮೆಗೆ ಬಡ್ಡಿ ರಹಿತ ಸಾಲ ನೀಡುವುದಿಲ್ಲ. ಅಭಿವೃದ್ಧಿಗಾಗಿ ಸರ್ಕಾರಗಳು ಮಾಡುವ ಸಾಲಗಳಿಗೂ ಶೇ.6 ರಿಂದ 8 ರಷ್ಟು ಬಡ್ಡಿ ವಿಧಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಮಹಿಳೆಯರಿಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲದ ಜತೆಗೆ ಪ್ರತಿ ಗ್ರಾಮದ ಒಂದು ಸ್ತ್ರೀಶಕ್ತಿ ಸಂಘಕ್ಕೆ 1.5 ಲಕ್ಷ ಧನ ಸಹಾಯ ನೀಡುತ್ತಿದೆ. ಇದನ್ನು ಬಳಸಿಕೊಂಡು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಇತರರಿಗೆ ಉದ್ಯೋಗ ನೀಡಬೇಕು ಎಂದರು.


ಸ್ತ್ರೀಶಕ್ತಿ ಸಂಘಗಳು ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಮತ್ತು ಕೌಶಲ ತರಬೇತಿ ನೀಡಲಾಗುತ್ತದೆ. ಇನ್ನು ಉತ್ಪಾದಿಸಿದ ವಸ್ತುಗಳಿಗೆ ಅಂತಾರಾಜ್ಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.


ಪ್ರತಿ ಗ್ರಾಮದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಪೂರೈಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಇದರಡಿ ಮಂಚೇನಹಳ್ಳಿ ವ್ಯಾಪ್ತಿಯ ಗ್ರಾಮಗಳ ಮನೆಗಳಿಗೆ ನೀರಿನ ಸೌಕರ್ಯ ಒದಗಿಸಲಾಗುತ್ತದೆ ಎಂದರು.


ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮಹಿಳೆಯರ ಸ್ವಾಭಿಮಾನ ಕಾಪಾಡುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಿವೆ. ದೇಶದಲ್ಲಿ ಸುಮಾರು 11 ಕೋಟಿ ಶೌಚಗೃಹಗಳ ನಿರ್ಮಾಣ ಮಾಡಲಾಗಿದ್ದು, ತೀವ್ರ ಸಂಕಷ್ಟ ಎದುರಿಸುತ್ತಿದ್ದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಯಾಗದಂತೆ ಆತ್ಮಗೌರವದ ಜೀವನ ನಡೆಸಲು ಸಹಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದರು.


ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯ ಬಡವರಿಗೆ 5 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗೆ 10 ಸಾವಿರ ಸೇರಿ ಒಟ್ಟು 15 ಸಾವಿರಕ್ಕೂ ಹೆಚ್ಚು ನಿವೇಶನಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಗುರಿ ಸಾಧಿಸಲಿದ್ದು, ಎಲ್ಲರಿಗೂ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಲಾಗುತ್ತದೆ. ಇನ್ನು ಕೊಳಚೆ ನಿರ್ಮೂಲನಾ ಮಂಡಳಿಯಿಂದ 750 ಮನೆಗಳ ನಿರ್ಮಾಣ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
44 ಸ್ತ್ರೀಶಕ್ತಿ ಸಂಘಗಳಿಗೆ 1.96 ಕೋಟಿ ರೂ. ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಮುಖಂಡರಾದ ಅಶ್ವತ್ಥಪ್ಪ, ಮರಳುಕುಂಟೆ ಕೃಷ್ಣಮೂರ್ತಿ, ಮುನಿಕೃಷ್ಣಪ್ಪ ಮತ್ತಿತರರು ಇದ್ದರು.