ಗುಡಿಬಂಡೆ ಪಟ್ಟಣದ ಪಿಎಂಶ್ರೀ ಶಾಲೆ ಮುಖ್ಯಶಿಕ್ಷಕರನ್ನು ಅಮಾನತು ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕನ್ನಡಪರ, ದಲಿತಪರ ಸಂಟನೆಗಳೊಂದಿಗೆ ಪಾಲಕರು ಮನವಿ ಮಾಡಿದ್ದಾರೆ.
- ಸಮಸ್ಯೆ ಗಮನಕ್ಕೆ ತಂದಿದ್ದಕ್ಕೆ ಅಮಾನತು ಶಿಕ್ಷೆ ಏಕೆ?
ಸಮಸ್ಯೆ ಗಮನಕ್ಕೆ ತಂದಿದ್ದಕ್ಕೆ ಅಮಾನತು ಶಿಕ್ಷೆ ಏಕೆ?
ಗುಡಿಬಂಡೆ: ಪಟ್ಟಣದ ಪಿಎಂಶ್ರೀ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಎಂ.ಶಂಕರ್ ಅವರನ್ನು ಅಮಾನತು ಮಾಡಿ ಆದೇಶಿಸಿರುವುದನ್ನು ವಿರೋಧಿಸಿ ಪಟ್ಟಣದ ಕನ್ನಡಪರ, ದಲಿತಪರ ಸಂಟನೆ ಮುಖಂಡರು ಹಾಗೂ ಪಾಲಕರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿ ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂದು ಮನವಿ ನೀಡಿದರು.
ಪಾಲಕ ಉಪ್ಪಾರಹಳ್ಳಿ ಶ್ರೀನಿವಾಸ ಮಾತನಾಡಿ, ಗುಡಿಬಂಡೆ ಪಟ್ಟಣದಲ್ಲಿನ ಪಿಎಂಶ್ರೀ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಪ್ರಭಾರಿಯನ್ನು ನೀಡಿದ್ದು, ಪಿ.ಎಂ.ಶ್ರೀ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದಾಗಿಂದ ಶಾಲೆಯಲ್ಲಿ ದಾಖಲಾತಿ ಹೆಚ್ಚಾಗಿದೆ. ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇರುವುದು ಹಾಗೂ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡ ಪಾಲಕರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಪತ್ರಕರ್ತರು ಸುದ್ದಿ ಮಾಡಲು ಭೇಟಿ ನೀಡಿ ಮುಖ್ಯಶಿಕ್ಷಕರುನ್ನು ಕೊಠಡಿಗಳ ಬಗ್ಗೆ ವಿಚಾರಿಸಿದಾಗ ಅವರು ಹೌದು ಕೊಠಡಿಗಳ ಸಂಖ್ಯೆ ಕಡಿಮೆ ಇದೆ, ಕೆಲ ಕೊಠಡಿ ಶಿಥಿಲಗೊಂಡಿವೆ ಬೇಗ ಶಾಸಕರು ಹಾಗೂ ಡಿಡಿಪಿಐ ಅವರು ಅನುದಾನ ಬಿಡುಗಡೆ ಮಾಡಿಸಿ ನೂತನ ಕೊಠಡಿಗಳನ್ನು ನಿರ್ಮಿಸಿದರೆ ಬಡ ಮಕ್ಕಳಿಗೆ ಅನುಕೂಲವಾಗುತ್ತೆ ಎಂದು ಹೇಳಿಕೆ ನೀಡಿದ್ದರು. ಅವರು ನೀಡಿರುವ ಹೇಳಿಕೆಯಿಂದ ಇಲಾಖೆಗೆ ಮುಜುಗರ ಉಂಟಾಗಿದೆ ಎಂಬ ನೆಪ ಹೇಳಿ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಯಾವುದೇ ಪರಿಶೀಲನೆ ನಡೆಸದೆ ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ಇಂತಹ ಉತ್ತಮ ಶಿಕ್ಷಕರನ್ನೆ ಅಮಾನತು ಮಾಡಿದರೆ ನಮ್ಮ ಮಕ್ಕಳ ಪರಿಸ್ಥಿತಿ ಹೇಗೆ, ಕೂಡಲೇ ಅವರ ಅಮಾನತು ವಾಪಸ್ ಪಡೆಯಬೇಕು. ಇಲ್ಲವಾದರೆ ನಾವು ನಮ್ಮ ಮಕ್ಕಳೊಂದಿಗೆ ಸೋಮವಾರ ಹೋರಾಟ ಮಾಡುತ್ತೇವೆ ಎಂದರು.
ಪಾಲಕ ಲ್ಮನಾರಾಯಣ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಂದರ್ಭಿಕವಾಗಿ ಮಾಧ್ಯಮದವರಿಗೆ ಹೇಳಿದ್ದು ತಪ್ಪು ಎಂದು ಶಿಕ್ಷಕ ಶಂಕರ್ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಅಮಾನತನ್ನು ವಾಪಸ್ ಪಡೆಯಬೇಕು. ಇಲ್ಲವೆ ಚಿಕ್ಕಬಳ್ಳಾಪುರದ ಡಿಡಿಪಿಐ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದರು.
ಪಾಲಕರಾದ ಗಂಗರಾಜು, ರಾಮಾಂಜಿ, ಮಂಜುನಾಥ್, ಕರವೇ ಅಧ್ಯಕ್ಷ ಶ್ರೀನಿವಾಸ್ ಯಾದವ್, ಪದಾಧಿಕಾರಿಗಳು ಇದ್ದರು.