ರಕ್ಷಿತಾ ರೆಡ್ಡಿ ಹಾಗೂ ರಾಜಶೇಖರ್ ರೆಡ್ಡಿ ದಂಪತಿ 
ಚಿಕ್ಕಬಳ್ಳಾಪುರ

ಹೆದ್ದಾರಿಯಲ್ಲಿ ಸರಣಿ ಅಪಘಾತ, ನವ ವಿವಾಹಿತೆ ಸೇರಿ ಇಬ್ಬರ ಸಾವು

ಚಿಕ್ಕಬಳ್ಳಾಪುರ: ಇಲ್ಲಿನ ಶೆಟ್ಟಿಗೆರೆ ಕ್ರಾಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್‌ ಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಧ್ರದ ಅನಂತಪುರದ ಅವಳಗಿ ರಕ್ಷಿತಾ ರೆಡ್ಡಿ ( ೨೭), ಪವನ್‌ ರೆಡ್ಡಿ (೩೦) ಮೃತರು. ರಕ್ಷಿತಾ ರೆಡ್ಡಿ ಪತಿ ರಾಜಶೇಖರ್‌ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಫ್ಟ್‌ ವೇರ್‌ ಎಂಜಿನಿಯರ್‌ ಗಳಾಗಿರುವ ರಕ್ಷಿತಾ ರೆಡ್ಡಿ ಹಾಗೂ ರಾಜಶೇಖರ್‌ ರೆಡ್ಡಿ ಕಳೆದ ೫ ತಿಂಗಳ ಹಿಂದೆ ಮದುವೆಯಾಗಿದ್ದರು. ಬೆಂಗಳೂರಿನಿಂದ ಆಂಧ್ರದ ಅವಳಗಿಗೆ ಕಾರಿನಲ್ಲಿ ತೆರಳುತ್ತಿದ್ದರು. ಇದರ ನಡುವೆ ಶೆಟ್ಟಿಗೆರೆ ಕ್ರಾಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಂಟೇನರ್‌ ಗೆ ಕಾರು ಡಿಕ್ಕಿ ಹೊಡೆದಿದೆ.
ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದೆಡೆ ಮುಂಜಾವ ಬೆಂಗಳೂರು ಹಾಗೂ ಹೈದರಾಬಾದ್‌ ಗೆ ಸಂಪರ್ಕ ಕಲ್ಪಿಸುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ೪೪ ರ ಬೈಪಾಸ್‌ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು ವಾಹನಗಳು ನುಜ್ಜುಗುಜ್ಜಾಗಿದೆ. ಆದರೆ, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಹೆದ್ದಾರಿಯಲ್ಲಿ ಅತಿ ವೇಗವಾಗಿ ಸಂಚರಿಸುತ್ತಿದ್ದ ಕಾರು ದಿಢೀರನೇ ಬ್ರೇಕ್‌ ಹಾಕಿ ನಿಲುಗಡೆಯಾದ ಹಿನ್ನೆಲೆಯಲ್ಲಿ ನಿಯಂತ್ರಣ ಕಳೆದುಕೊಂಡು ೨ ಕಾರು, ೨ ಲಾರಿ ಹಾಗೂ ೧ ಟ್ಯಾಂಕರ್‌ ಲಾರಿಯು ಡಿಕ್ಕಿ ಹೊಡೆದಿದೆ. ಇದರ ರಭಸದಲ್ಲಿ ಸಿಮೆಂಟ್‌ ಲಾರಿಯು ರಸ್ತೆಯ ಬದಿಗೆ ಉರುಳಿ ಬಿದ್ದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.