ಮೃತಪಟ್ಟ ಬೈಕು ಸವಾರರು 
ಚಿಕ್ಕಬಳ್ಳಾಪುರ

ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರ ಸಾವು

ಚಿಕ್ಕಬಳ್ಳಾಪುರ: ಇಲ್ಲಿನ ಹೊನ್ನೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಲೂಕಿನ ಬಾದಗಾನಹಳ್ಳಿಯ ವರುಣ್ (21) ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಜೀವನ್ ( 22) ಮೃತರು. ಅತಿ ವೇಗವಾಗಿ ಬಂದ ಅಪರಿಚಿತ ವಾಹನವು ಬೈಕಿಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತ ವಾಹನವನ್ನು ಪತ್ತೆ ಹಚ್ಚಲು ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ವರುಣ್ ಹಾಗೂ ಜೀವನ್ ಇಬ್ಬರು ಗೆಳೆಯರು. ತಾಲೂಕಿನ ಸೂಲಾಲಪ್ಪದಿನ್ನೇ ಸಮೀಪದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಪಾಳಿ ಮುಗಿದ ವೇಳೆ ಕಂಪನಿಯ ಕ್ಯಾಬ್ ಹೊರಟು ಹೋಗಿತ್ತು. ಇದಕ್ಕೆ ಬಾದಗಾನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದರು. ಇದೇ ವೇಳೆ ಅಪಘಾತ ಸಂಭವಿಸಿದೆ. ಇಬ್ಬರ ಸಾವಿನೊಂದಿಗೆ ಎರಡು ಕುಟುಂಬಗಳು ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡಿವೆ.