ವಶಪಡಿಸಿಕೊಂಡ ಹಣದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್ ಮತ್ತಿತರರನ್ನು ಕಾಣಬಹುದು 
ಚಿಕ್ಕಬಳ್ಳಾಪುರ

ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಎಗರಿಸಿದ್ದ 55 ಲಕ್ಷ ವಶ, ಒಬ್ಬನ ಬಂಧನ

ಚಿಕ್ಕಬಳ್ಳಾಪುರ: ಹೋಟೆಲ್‌ ಮುಂಭಾಗ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿನ 55 ಲಕ್ಷ ರೂ ‌ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಣ ಸಮೇತ ಒಬ್ಬ ಕಳ್ಳನನ್ನು ಬಂಧಿಸಿದ್ದು ಉಳಿದ ಮೂವರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಧ್ಯಪ್ರದೇಶ ಮೂಲದ ಅಸ್ಲಂಖಾನ್ (36), ಮುನೀರ್‌ಖಾನ್( 50), ಆಬ್ಯಾಖಾನ್ (44), ಶೇರು(35) ಆರೋಪಿಗಳು. 55 ಲಕ್ಷ ರೂ ನಗದು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಡಿ.12 ರಂದು ಆಂಧ್ರ ಮೂಲದ ಉದ್ಯಮಿ ವೆಂಕಟೇಶ್ವರ್ ರಾವ್ ಎಂಬುವರು ಬೆಂಗಳೂರಿನ ಮಾರತ್ ಹಳ್ಳಿಯಲ್ಲಿನ ಕಟ್ಟಡವನ್ನು ಮಾರಿ, ಖರೀದಿದಾರರಿಂದ 55 ಲಕ್ಷ ಹಣ ಹಾಗೂ ದಾಖಲೆಗಳನ್ನು ಪಡೆದುಕೊಂಡು ಹೈದರಾಬಾದ್‌ಗೆ ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ನಲ್ಲಿ ತೆರಳುತ್ತಿದ್ದರು. ಇದರ ನಡುವೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯ ಸಾಯಿ ಡೆಲಿಕೆಸಿ ಹೋಟೆಲ್ ಮುಂಭಾಗ ಬಸ್ ನಿಲ್ಲಿಸಿದ್ದಾಗ ಊಟಕ್ಕೆ ಹೋಗಿದ್ದರು. ಇದೇ ವೇಳೆ ಬಸ್ ನೊಳಗಿನ ಬ್ಯಾಗ್ ನಲ್ಲಿದ್ದ 55 ಲಕ್ಷ ರೂ ಗಳನ್ನು ಆರೋಪಿಗಳು ದೋಚಿ ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.