ಚಿಕ್ಕಬಳ್ಳಾಪುರದ ಎಯು ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವುದರ ದೃಶ್ಯ 
ಚಿಕ್ಕಬಳ್ಳಾಪುರ

ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ, ಮೂರು ಬ್ಯಾಗುಗಳಲ್ಲಿ ವಸ್ತುಗಳ ಸಾಗಾಟ

ಚಿಕ್ಕಬಳ್ಳಾಪುರ: ನಗರದ ಬಿ.ಬಿ. ರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಳ್ಳರು ಅಂಗಡಿ ಬೀಗ ಮುರಿದು ಒಳ ನುಗ್ಗಿ ಆಭರಣ ದೋಚುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಇದನ್ನಾಧಾರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈಗಾಗಲೇ ಅನುಮಾನಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಸೋಮವಾರ ಎಯು ಜ್ಯುವೆಲ್ಲರ್ಸ್ ಅಂಗಡಿ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಬರೋಬ್ಬರಿ 3 ಕೋಟಿ ರೂ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.
ಇದೇ ವೇಳೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್​ಅನ್ನು ತೆಗೆದುಕೊಂಡು ಹೋಗಿದ್ದರು. ಈ ಖದೀಮರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದು ಸಮೀಪದ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಇದರಲ್ಲಿ ಮಧ್ಯರಾತ್ರಿ ಅಂಗಡಿಗೆ ಪ್ರವೇಶಿಸಿದ ಕಳ್ಳರು, ಮೂರು ಗಂಟೆಗೂ ಹೆಚ್ಚು ಕಾಲ ಅಂಗಡಿಯಲ್ಲಿ ಉಳಿದು ದರೋಡೆ ನಡೆಸಿದ್ದಾರೆ. ಮೊದಲು ರಾಡ್ ಬಳಸಿ ಬೀಗ ಒಡೆಯಲು ಯತ್ನಿಸಿದ್ದು ಬಳಿಕ ಕಟರ್‌ನಿಂದ ಬೀಗ ಕತ್ತರಿಸಿ ಒಳ ಪ್ರವೇಶಿಸಿದ್ದಾರೆ. ಮೂರು ಬ್ಯಾಗ್‌ಗಳಲ್ಲಿ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದು ಇದಕ್ಕೆ 4 ಗಂಟೆ ಅವಧಿ ತೆಗೆದುಕೊಂಡಿದ್ದಾರೆ.