ವಿದ್ಯಾರ್ಥಿಗಳಿಗೆ ಆನ್ ಲೈನ್ ಸಂವಾದದಲ್ಲಿ ಮಾರ್ಗದರ್ಶನ ನೀಡುತ್ತಿರುವ ನುರಿತ ಶಿಕ್ಷಕರು
ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿ ಮಾರ್ಗದರ್ಶನ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ನಾನಾ ಕಸರತ್ತು ನಡೆಸುತ್ತಿದ್ದು ಈ ಪೈಕಿ ಆನ್ ಲೈನ್ ಸಂವಾದದ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುತ್ತಿದೆ.
ಈಗಾಗಲೇ ಗುರುತಿಸಲಾದ ಮೂರು ವಿಭಾಗಗಳ ವಿದ್ಯಾರ್ಥಿಗಳ ಪೈಕಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಳ ರೀತಿಯ ತಂತ್ರಗಳು, ಸುಲಭ ಅಭ್ಯಾಸಗಳ ಮಾರ್ಗದರ್ಶನ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿನ ಅನುಮಾನಗಳನ್ನು ಬಗೆಹರಿಸುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಠ್ಯ ವಿಚಾರಗಳ ಕ್ರಿಯಾಶೀಲ ಚರ್ಚೆ ಸೇರಿದಂತೆ ನಾನಾ ಚಟುವಟಿಕೆ ನಡೆಯುತ್ತಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳು ನಿರಂತರ ಶಾಲೆಗಳಿಗೆ ಭೇಟಿ, ಪ್ರಶ್ನೆಪತ್ರಿಕೆಗಳ ಮಾದರಿ ಹಾಗೂ ವಿಶೇಷ ಮಾರ್ಗದರ್ಶಿ ಗೈಡು ವಿತರಣೆ, ಪರಿಹಾರಾತ್ಮಕ ಬೋಧನೆಯ ವಿವಿಧ ಕೆಲಸಗಳೊಂದಿಗೆ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು ನಡಸಲಾಗುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಸುಕನ್ಯಾ ನೇತೃತ್ವದಲ್ಲಿ ನಗರದ ವಾಪಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಮಟ್ಟದ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಯ ಚರ್ಚಿಸಲಾಯಿತು. ಪೆರೇಸಂದ್ರ, ಮಂಡಿಕಲ್ಲು, ಆವಲಗುರ್ಕಿ, ಆರ್.ಗೊಲ್ಲಹಳ್ಳಿ, ಭಾರತಿ, ಚಿತ್ರಪಿನಾಕಿನಿ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಆನ್ ಲೈನ್ ಸಂವಾದದಲ್ಲಿ ಭಾಗವಹಿಸಿದ್ದವು.
ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಸರಳ ವಿಷಯಗಳು, ಕಠಿಣ ಅಂಶಗಳ ಚರ್ಚೆ, ಪರೀಕ್ಷೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಯ ವೈಖರಿ, ಕಾಡುತ್ತಿರುವ ಗೊಂದಲ, ನಿರೀಕ್ಷೆಯ ಅಗತ್ಯ ಮಾರ್ಗದರ್ಶನ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಯಿತು.