ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಒತ್ತಡ ಹೇಗೆ ಕಡಿಮೆ ಮಾಡಿಕೊಳ್ಳುವುದು?, ಪರೀಕ್ಷೆಯಲ್ಲಿ (ಉರ್ದು ಭಾಷೆ ವಿಷಯ) ೧ ಅಂಕದ ಪ್ರಶ್ನೆಗಳು ಪುನರಾವರ್ತಿತಗೊಳ್ಳುತ್ತಿರುವುದರ ಕಡೆಗೆ ಏಕೆ ಗಮನಹರಿಸುತ್ತಿಲ್ಲ?, ಕಡಿಮೆ ಅಂಕಗಳು ಬರುವ ಭಯಕ್ಕೆ ಪರಿಹಾರ ಏನು?, ಪ್ರಬಂಧ ಬರೆಯುವ ನೀಲಿನಕ್ಷೆ ಮಾರ್ಗದರ್ಶನ ನೀಡಬಹುದಲ್ಲವೇ?.
ಇವು ನಗರದಲ್ಲಿನ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ 2025-26 ನೇ ಸಾಲಿನ ಮಾರ್ಚ್-ಏಪ್ರಿಲ್ ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಬುಧವಾರ ಕೈಗೊಂಡಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕೇಳಿ ಬಂದ ಪ್ರಶ್ನೆಗಳು. ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ನುರಿತ ತಜ್ಞರ ಜತೆಗೆ ಜಿಲ್ಲಾಧಿಕಾರಿ ಜಿ. ಪ್ರಭು, ಜಿ.ಪಂ.ಸಿಇಒ ಡಾ ವೈ.ನವೀಣ್ ಭಟ್ ನಯವಾಗಿ ಉತ್ತರಿಸಿದರು. ಇದರ ಮೂಲಕ ಪರೀಕ್ಷೆಯನ್ನು ಧೈರ್ಯದಿಂದ ಬರೆಯಲು ಆತ್ಮಸ್ಥೈರ್ಯ ತುಂಬಿಸಿದರು.
ಆಯಾ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಪಠ್ಯದ ಅಂಶಗಳು, ಪರೀಕ್ಷೆಯ ವ್ಯವಸ್ಥೆ, ಕಲಿಕಯ ಮಾರ್ಗದರ್ಶನ ಸೇರಿದಂತೆ ಹಲವು ಪ್ರಶ್ನೆಗಳು ತೂರಿ ಬಂದವು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಾಕಿ ಉಳಿದಿರುವ ಪರೀಕ್ಷಾ ಪೂರ್ವ ಸಿದ್ಧತಾ ಅವಧಿಯಲ್ಲಿ ಪುನರಾವರ್ತಿತ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶ ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ತಾಂತ್ರಿಕ ಸಲಹೆಗಾರ್ತಿ ಫರ್ಜಾನ ಮತ್ತಿತರರು ಇದ್ದರು.