ಬೆದರಿಕೆ ಹಿನ್ನೆಲೆಯಲ್ಲಿ ಪ್ರತಿಭಟಿಸಿದ ಕುಟುಂಬಸ್ಥರು 
ಚಿಕ್ಕಬಳ್ಳಾಪುರ

ಚುನಾವಣೆಯಲ್ಲಿ ವೋಟು ಹಾಕಲು ಪಡೆದ ಹಣದ ವಿಚಾರವಾಗಿ ಬೀದಿಯಲ್ಲಿ ಗಲಾಟೆ

ಚಿಕ್ಕಬಳ್ಳಾಪುರ: ಚಿಮುಲ್‌ ಚುನಾವಣೆಯಲ್ಲಿ ಮತ ಚಲಾವಣೆಗೆ ನೀಡಿದ ಹಣ ವಾಪಸ್ಸಾತಿ ವಿಚಾರದಲ್ಲಿನ ಗಲಾಟೆಯ ದೂರು ಪೊಲೀಸ್‌ ಠಾಣೆಗೆ ಸಲ್ಲಿಕೆಯಾಗಿದೆ.

ನಾಸ್ತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್‌ ಎಂಬುವವರು ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ಯುವ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ನಾಗೇಶ್‌ ರೆಡ್ಡಿ, ಗ್ರಾಮದ ಮುಖಂಡರಾದ ಹರೀಶ್‌, ಗೋವಿಂದ, ಶಿವ, ರಾಮಕೃಷ್ಣ, ಅಂಬರೀಷ್‌, ವೆಂಕಟಪತಿ, ಗೌತಮ್‌ ಮತ್ತಿತರರ ವಿರುದ್ಧ ದೂರು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಕ್ಷೇತ್ರದಲ್ಲಿ ಚಿಮುಲ್‌ ಚುನಾವಣೆಗೆ ಕಾಕಲಚಿಂತೆ ರಾಜಣ್ಣ ಸ್ಪಧರ್ಧಿಸಿದ್ದು ಇವರಿಗೆ ಮತ ಚಲಾಯಿಸಲು ೫ ಲಕ್ಷ ರೂಗಳನ್ನು ನೀಡಲಾಗಿತ್ತು. ಆದರೆ, ಇದೇ ವೇಳೆ ಕೈ ಮುಖಂಡರಾದ ಡ್ಯಾನ್ಸ್‌ ಶ್ರೀನಿವಾಸ್‌, ನಾಗೇಶ್‌ ರೆಡ್ಡಿ ಮನೆಯ ಬಳಿ ಬಂದು ಅಡ್ಡದಾರಿಯಲ್ಲಿ ಬಿಜೆಪಿಗೆ ಮತ ಚಲಾಯಿಸಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಎಂದು ತಿಳಿಸಿದರು. ಹಾಗೆಯೇ ಬಿಜೆಪಿಯವರೊಂದಿಗೆ ಪ್ರವಾಸ ಕಳುಹಿಸಿದರು. ಇದರ ನಡುವೆ ಕಾಂಗ್ರೆಸ್‌ ಬೆಂಬಲಿತರು ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಅವರ ಹಿಂಬಾಲಕರು ಎಂಬುದಾಗಿ ಹೇಳಿಕೊಂಡು ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಅಳಿಯ ಹರೀಶ್‌, ರಮೇಶ್‌, ಪತ್ನಿ ರತ್ನಮ್ಮ, ಮಗಳು ಸ್ನೇಹರನ್ನುಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಕೊಟ್ಟಿರುವ ಹಣವನ್ನು ವಾಪಸ್‌ ಕೊಡಬೇಕು. ಇದನ್ನು ಹಂಚಿಕೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು. ಇದಕ್ಕೆ ಮನೆಯಲ್ಲಿನ ೧ ಲಕ್ಷ ರೂಗಳನ್ನು ತಂದು ವಾಪಸ್‌ ಕೊಡಲಾಯಿತು. ಆದರೂ ಅಭ್ಯರ್ಥಿ ಕಡೆಯಿಂದ ಪಡೆದುಕೊಂಡ ೧೦ ಲಕ್ಷ ರೂ ನೀಡಬೇಕು. ಇಲ್ಲದಿದ್ದಲ್ಲಿ ಊರಿನಲ್ಲಿರಲು ಬಿಡುವುದಿಲ್ಲ ಎಂಬುದಾಗಿ ಪ್ರಾಣ ಬೆದರಿಕೆಯನ್ನೊಡ್ಡಿದ್ದಾರೆ. ಇದಕ್ಕೆ ಸೂಕ್ತ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ವೆಂಕಟೇಶಪ್ಪ ದೂರು ಸಲ್ಲಿಸಿದ್ದಾರೆ.