ಚಿಂತಾಮಣಿ ನಗರದ ಉಪನೋಂದಣಿ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿಗೆ ಕಾದು ನಿಂತಿರುವ ಸಾರ್ವಜನಿಕರು.
- ಸೇವೆ ವ್ಯತ್ಯಯವಾಗಿ ಪರದಾಡಿದ ಸಾರ್ವಜನಿಕರು
- ಸರ್ಕಾರದ ಬೇಜವಾಬ್ದಾರಿಗೆ ಆಕ್ರೋಶ
- ಬಹುತೇಕ ಸಾರ್ವಜನಿಕರು ಗಂಟೆಗಟ್ಟಲೇ ಕಾದರೂ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ರಾಜ್ಯದ ಎಲ್ಲ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬುಧವಾರ ಸರ್ವರ್ ಸ್ಥಗಿತಗೊಂಡಿದ್ದು, ಆಸ್ತಿ ನೋಂದಣಿ ಕಾರ್ಯಕ್ಕೆ ಸಮಸ್ಯೆಯಾಯಿತು. ನಗರದ ತಹಸೀಲ್ದಾರ್ ಕಚೇರಿಯಲ್ಲಿರುವ ಉಪನೋಂದಣಿ ಕಚೇರಿಗೆ ಬಂದು ಬಹುತೇಕ ಸಾರ್ವಜನಿಕರು ಗಂಟೆಗಟ್ಟಲೇ ಕಾದರೂ ಸರ್ವರ್ ಸಮಸ್ಯೆ ಬಗೆಹರಿಯಲೇ ಇಲ್ಲ.
ರಾಜ್ಯದ 282 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಆನ್ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಈ ಕಚೇರಿಗಳಲ್ಲಿ ದಿನವೂ ನೋಂದಣಿ ಪ್ರಕ್ರಿಯೆಗೆ ಜನ ಮುಗಿ ಬೀಳುವುದು ಸಾಮಾನ್ಯ. ಕಚೇರಿಗಳಿಗೆ ಬಂದು ಕಾದು ಕುಳಿತುಕೊಳ್ಳುವುದನ್ನು ತಪ್ಪಿಸಲು ಅರ್ಜಿ ಸಲ್ಲಿಸಿದವರಿಗೆ ಮೊದಲೇ ದಿನಾಂಕ ನಿಗದಿಪಡಿಸಿ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ.
ಬುಧವಾರ ನೋಂದಣಿಗೆ ಸಮಯ ಪಡೆದಿದ್ದವರು ಕಚೇರಿ ಎದುರು ನೂರಾರು ಸಂಖ್ಯೆ ಜನ ಜಮಾಯಿಸಿದ್ದರು. ಕಚೇರಿ ಆರಂಭವಾದಾಗಿನಿಂದ ಸರ್ವರ್ ಇಲ್ಲದೆ, ಬಹುತೇಕ ಕಚೇರಿಗಳಲ್ಲಿ ಒಂದೇ ಒಂದು ಆಸ್ತಿಯೂ ನೋಂದಣಿಯಾಗಿಲ್ಲ.ಆಸ್ತಿ ಮಾರಾಟ, ಖರೀದಿ ಮಾಡುವವರು ಕುಟುಂಬ ಸಮೇತ ಬಂದು ಕುಳಿತಿದ್ದರು. ಸರ್ಕಾರಕ್ಕೆ ರಾಜಸ್ವ ತಂದುಕೊಡುವ ಇಲಾಖೆಯನ್ನು ತಾಂತ್ರಿಕವಾಗಿ ಸಬಲಗೊಳಿಸಲು ಸರ್ಕಾರಕ್ಕೆ ಬೇಜವಾಬ್ದಾರಿ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ವರ್ ಕಾರಣ ನೀಡಿ ಅಧಿಕಾರಿಗಳು ಕೈಕಟ್ಟಿ ಕುಳಿತರು. ಮತ್ತೊಂದು ದಿನ ಕಚೇರಿಗೆ ಬರಬೇಕಾಗಿದೆ. ಸಮಯ ವ್ಯರ್ಥ ಆಗಿರುವುದಕ್ಕೆ ಪರಿಹಾರ ಕೊಡುವವರು ಯಾರು ಎಂದು ಜನ ಪ್ರಶ್ನಿಸಿದರು. ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಶುಲ್ಕ ಪಾವತಿಸದಿದ್ದರೆ ಸಾರ್ವಜನಿಕರಿಂದ ಸರ್ಕಾರ ದಂಡ ಪಡೆಯುತ್ತದೆ. ಜನರಿಗೆ ಆಗಿರುವ ತೊಂದರೆಗೆ ಹೊಣೆ ಯಾರು ಎಂದು ಚಿಂತಾಮಣಿ ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಕಾದು ಸಾರ್ವಜನಿಕರು ವಾಪಸ್ಸಾದರು.ಈ ರೀತಿ ಸಮಸ್ಯೆ ಉಂಟಾಗುವುದು ಇದೇ ಮೊದಲಲ್ಲ. ಆಗಾಗ ಸರ್ವರ್ ಸ್ಥಗಿತಗೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಜನ ಒತ್ತಾಯಿಸಿದರು.
3 ಗಂಟೆಯಾದರೂ ಸರ್ವರ ಸಮಸ್ಯೆ ಬಗೆಹರಿಸಿಲ್ಲ, ಈಗ ಸರ್ವರ್ ಸರಿ ಹೋದರು ನೋಂದಣೆಯಾಗಲ್ಲ, ಅಪ್ರೋವರ್ ಆಗಿ, ಹಣ ಪಾವತಿ ಮಾಡುವಷ್ಟರಲ್ಲಿ 5.-30 ಆಗುತ್ತೆ ಅಷ್ಟು ಹೊತ್ತಿಗೆ ನೋಂದಣಿ ಲಾಕ್ ಆಗುತ್ತೆ ಎಂದು ಸಿಬ್ಬಂದಿ ವಿವರಿಸಿದರು.