ಚಿಕ್ಕಬಳ್ಳಾಪುರ: ಬೇರೆಡೆ ಜನ್ಮಜಾತ ಹೃದಯ ಕಾಯಿಲೆಯ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಗಂಭೀರ ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರೂ ವರೆ ವರ್ಷದ ಬಾಲಕಿಗೆ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ವೈದ್ಯರು ಹೊಸ ಬದುಕು ನೀಡಿದ್ದಾರೆ. ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಉಸಿರಾಟದ ನಾಳವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಿದ್ದಾರೆ.
ಛತ್ತೀಸ್ಗಢ ಮೂಲದ ಬಾಲಕಿ ಶಿವಾಂಗಿ ಶರ್ಮಾ 2025ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ನಂತರ ಉಂಟಾದ ತೊಂದರೆಗಳಿಂದಾಗಿ ಆಕೆಗೆ ದೀರ್ಘಕಾಲ ಉಸಿರಾಟದ ಟ್ಯೂಬ್ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ‘ಸಬ್ಗ್ಲೋಟಿಕ್ ಸ್ಟೆನೋಸಿಸ್’ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಇದರ ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟಕರವಾಗಿತ್ತು.
ಚಿಕಿತ್ಸೆಗಾಗಿ ಛತ್ತೀಸ್ಗಢದ ಏಮ್ಸ್ ಸೇರಿದಂತೆ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಪ್ರಕರಣದ ಜಟಿಲತೆ ಹಿನ್ನೆಲೆಯಲ್ಲಿ, ಶಸ್ತ್ರಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿದ್ದರು. ಅಲ್ಲದೇ ಆರ್ಥಿಕವಾಗಿ ದುರ್ಬಲ ಕುಟುಂಬವಾಗಿದ್ದರಿಂದ ದುಬಾರಿ ಚಿಕಿತ್ಸೆ ಭರಿಸುವುದೂ ಅವರಿಗೆ ಸಾಧ್ಯವಾಗಿರಲಿಲ್ಲ.
ಕೊನೆಯ ಪ್ರಯತ್ನವಾಗಿ ಬಾಲಕಿಯನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಇಲ್ಲಿನ ತಜ್ಞ ವೈದ್ಯರ ತಂಡ ಈ ಸವಾಲನ್ನು ಸ್ವೀಕರಿಸಿ ಹಂತ ಹಂತವಾಗಿ ಚಿಕಿತ್ಸೆ ನೀಡಿತು. ಲೇಸರ್, ಕೋಬ್ಲೇಷನ್, ಬಲೂನ್ ಡೈಲೇಷನ್ ಹಾಗೂ ಸ್ಟೆಂಟ್ ಅಳವಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಸಿರಾಟದ ನಾಳವನ್ನು ಸರಿಪಡಿಸಲಾಯಿತು. ಕಳೆದ ಮೇ.11 ರಂದು ಸ್ಟೆಂಟ್ ತೆಗೆದುಹಾಕಲಾಗಿದ್ದು, ಬಳಿಕ ಹಂತ ಹಂತವಾಗಿ ಚಿಕಿತ್ಸೆ ನೀಡುವ ಮೂಲಕ ಕೊನೆಗೆ ಟ್ರೇಕಿಯೊಸ್ಟಮಿ ಟ್ಯೂಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಇದರಿಂದ ಬಾಲಕಿಗೆ ಸಹಜವಾಗಿ ಉಸಿರಾಡಲು ಮತ್ತು ಮಾತನಾಡಲು ಸಾಧ್ಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ ಗೌರವ್ ಶರ್ಮಾ, “ಮುದ್ದೇನಹಳ್ಳಿ ಆಸ್ಪತ್ರೆ ದೇವಾಲಯ ಇದ್ದ ಹಾಗೆ. ಯಾವ ಆಸ್ಪತ್ರೆಯಲ್ಲೂ ಸಿಗದ ವೈದ್ಯಕೀಯ ಸೌಲಭ್ಯ ಮತ್ತು ಪ್ರೀತಿ ಸಿಕ್ಕಿದೆ. ನನ್ನ ಮಗಳಿಗೆ ಬದುಕು ಕೊಟ್ಟ ವೈದ್ಯರಿಗೆ ಆಭಾರಿ. ನಮ್ಮಂತಹ ಬಡವರ ಬದುಕಿಗೆ ಇದು ಆಶಾಕಿರಣ" ಎಂದು ಸಂತಸವ್ಯಕ್ತಪಡಿಸಿದ್ದಾರೆ.
30 ಲಕ್ಷ ರೂಪಾಯಿ ವೆಚ್ಚವಾಗಬಹುದಾದ ಈ ಚಿಕಿತ್ಸೆಯನ್ನು ಆಸ್ಪತ್ರೆ ಉಚಿತವಾಗಿ ನೆರವೇರಿಸಿರುವುದು ಮಾನವೀಯ ವೈದ್ಯಕೀಯ ಸೇವೆಯ ಉದಾಹರಣೆಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.