ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾಗೆ ಬೆದರಿಕೆಯನ್ನೊಡ್ಡಿದ್ದ ರಾಜೀವ್ ಗೌಡ ಬಂಧನ 
ಚಿಕ್ಕಬಳ್ಳಾಪುರ

ಪೌರಾಯುಕ್ತೆಗೆ ಬೆದರಿಯೊಡ್ಡಿದ್ದ ರಾಜೀವ್ ಗೌಡ ಕೊನೆಗೂ ಬಂಧನ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾಗೆ ಬೆದರಿಕೆಯನ್ನೊಡ್ಡಿ ಪ್ರಕರಣದಲ್ಲಿ ಮೊದಲು ಪ್ರಭಾವಿ ರಾಜಕೀಯ ನಾಯಕ ರಾಜೀವ್‌ ಗೌಡನನ್ನು ವಶಕ್ಕೆ ಪಡೆಯಲು ನಿರೀಕ್ಷೆಯಂತೆ ನ್ಯಾಯಾಲಯದ ತೀರ್ಪಿನವರೆಗೂ ಎದುರು ನೋಡಿದ ಪೊಲೀಸರು, ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇದನ್ನು ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ದೃಢಪಡಿಸಿದ್ದು ಇನ್ನು ನಿಯಮಾನುಸಾರ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಪಿಸಿಸಿ ಸಂಯೋಜಕನಾಗಿದ್ದ ರಾಜೀವ್‌ ಗೌಡನನ್ನು ರಾಜಕೀಯ ಒತ್ತಡದಿಂದ ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸರ್ಕಾರಿ ಅಧಿಕಾರಿಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆಯಲ್ಲಿ ಆತ್ಮಸ್ಥೈರ್ಯ ಮೂಡಿಸುವುದರ ಜತೆಗೆ ಬೆದರಿಕೆಯನ್ನೊಡ್ಡಿದವರಿಗೆ ನಿಯಮಾನುಸಾರ ಪಾಠ ಕಲಿಸಲು ತಪ್ಪಿತಸ್ಥನನ್ನು ಕೂಡಲೇ ಬಂಧಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಸರ್ಕಾರಿ ನೌಕರರ ಸಂಘ, ಕರವೇ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟಿಸಿ, ಪೊಲೀಸರ ವೈಫಲ್ಯ ಹಾಗೂ ಆರೋಪಿಯ ಮೇಲಿನ ರಾಜಕೀಯ ಕೃಪಾಕಟಾಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದವು.
ಕಳೆದ ಜ.೧೪ ರಂದು ಶಿಡ್ಲಘಟ್ಟ ಪೌರಾಯುಕ್ತ ಜಿ.ಅಮೃತಾಗೆ ಫ್ಲೆಕ್ಸ್‌ ತೆರವು ವಿಚಾರವಾಗಿ ರಾಜೀವ್‌ ಗೌಡ ಮೊಬೈಲ್‌ ಕರೆ ಮಾಡಿ ಬೆದರಿಕೆಯನ್ನೊಡ್ಡಿದ್ದ ಆಡಿಯೋ ವೈರಲ್‌ ಆಗಿತ್ತು. ಚಪ್ಪಲಿಯಲ್ಲಿ ಹೊಡೆಸುವ, ಜನರನ್ನು ದಂಗೆ ಏಳಿಸುವ, ಬೆಂಕಿ ಹಚ್ಚುವ ಮಾತುಗಳೊಂದಿಗೆ ಅಧಿಕಾರಿಯನ್ನು ಟೀಕಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ನಗರ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ಅಧಿಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣವು ದಾಖಲಾಗಿತ್ತು. ಇದರ ನಡುವೆಯೂ ಆರೋಪಿಯು ರಾಜಕೀಯ ಪ್ರಭಾವಿಗಳ ನೆರಳಿನಲ್ಲಿ ಬೆಂಗಳೂರಿನಲ್ಲಿದ್ದರೂ ಬಂಧನವಾಗಿರಲಿಲ್ಲ. ಇನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಎಫ್‌ ಐ ಆರ್‌ ರದ್ದು ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಕೋರಿ ರಾಜೀವ್‌ ಗೌಡ ಸಲ್ಲಿಸಿದ್ದ ಅರ್ಜಿಯು ವಜಾಗೊಂಡಿತು. ಇದರ ವಿದ್ಯಮಾನಗಳನ್ನು ಎದುರು ನೋಡಿದ ಪೊಲೀಸರು ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ.