ಮೂಟೆಯಲ್ಲಿನ ದಾಳಿಂಬೆ ಹಣ್ಣುಗಳು 
ಚಿಕ್ಕಬಳ್ಳಾಪುರ

ತೋಟದಲ್ಲಿ ದಾಳಿಂಬೆ ಕದಿಯುವ ದಂಧೆ, ಅಪ್ರಾಪ್ತರ ಬಳಕೆ ಬಯಲು!

ಚಿಕ್ಕಬಳ್ಳಾಪುರ: ತೋಟದಲ್ಲಿನ ದಾಳಿಂಬೆ ಹಣ್ಣುಗಳನ್ನು ಅಪ್ರಾಪ್ತರಿಂದ ಕಳವು ಮಾಡಿಸಿ, ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಮಾರುತ್ತಿದ್ದ ದಂಧೆಯನ್ನು ರೈತರು ಬಯಲಿಗೆಳೆದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಸಮೀಪದ ವಿವಿಧ ತೋಟಗಳಲ್ಲಿನ ದಾಳಿಂಬೆ ಹಣ್ಣುಗಳನ್ನು ಕಿತ್ತು ಅಪ್ರಾಪ್ತನೊಬ್ಬ ಮೂಟೆಗೆ ತುಂಬಿಸುತ್ತಿದ್ದ. ಇದನ್ನು ಕಂಡ ರೈತರು ಪ್ರಶ್ನಿಸುತ್ತಿದ್ದಂತೆ ಆತ ಓಡಿ ಹೋಗಲು ಯತ್ನಿಸಿದ್ದಾನೆ. ಕೊನೆಗೆ ಹಿಡಿದು ವಿಚಾರಿಸಿದಾಗ ಒಂದೆಡೆ 750 ಕೆ.ಜಿ ತೂಕದ ದಾಳಿಂಬೆ ಹಣ್ಣುಗಳನ್ನು ಸಂಗ್ರಹಿಸಿರುವುದು, ಇದಕ್ಕೆ ಹಣ್ಣಿನ ವ್ಯಾಪಾರಿಗಳೇ ರೂವಾರಿ ಎನ್ನುವುದು ಗೊತ್ತಾಗಿದೆ.

ರೈತರ ಪೂರ್ವ ಯೋಜನೆಯಂತೆ ಆರೋಪಿ ಸಹಜವಾಗಿ ಕದ್ದ ಮಾಲನ್ನು ಚಿಕ್ಕಬಳ್ಳಾಪುರ ನಗರದಲ್ಲಿನ ಬಜಾರ್‌ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಿಗಳಿಗೆ ನೀಡಿದ್ದು ಇದರ ವಹಿವಾಟಿನಲ್ಲಿ ತೊಡಗಿದ್ದವರಿಗೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದಾಳಿಂಬೆ ತೋಟದಲ್ಲಿ ನಿರಂತರ ಕಳ್ಳತನದ ಹಿನ್ನೆಲೆಯಲ್ಲಿ ರೈತರು ರಾತ್ರಿ ವೇಳೆ ತೋಟದಲ್ಲಿ ಕಾವಲಿಗಿರುತ್ತಿದ್ದರು. ಇದರ ಬಗ್ಗೆ ಮಾಹಿತಿ ಹೊಂದಿದ್ದ ದಂಧೆಕೋರರು ಹಗಲಿನ ವೇಳೆ ಹುಡುಗನನ್ನು ಕಳುಹಿಸಿ, ದಾಳಿಂಬೆ ಕೀಳಿಸುತ್ತಿದ್ದರು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದ ರೈತರು ಕಳ್ಳತನ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.