ರಾಜ್ಯ ಚುನಾವಣಾ ಆಯೋಗದ ಲಾಂಛನ
ಪ್ರಸ್ತುತ ಮತದಾರ ಗುರುತಿನ ಚೀಟಿಗೆ ಕಲರ್ ಪೋಟೋ ಅಳವಡಿಕೆ, ತಂದೆ, ತಾಯಿ, ವಿಳಾಸ ಸೇರಿದಂತೆ ಇತರೆ ಮಾಹಿತಿಯಲ್ಲಿ ಲೋಪದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಆಯಾ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೂ ಭೇಟಿ, ಅಗತ್ಯ ದಾಖಲೆ ಹಾಗೂ ಪೋಟೋ ಸಂಗ್ರಹದಲ್ಲಿ ತೊಡಗಿದ್ದಾರೆ. ಮೊದಲ ಹಂತವಾಗಿ ಲೋಪದೋಷಗಳನ್ನು ಸರಿಪಡಿಸಿದ ಬಳಿಕ ಅನರ್ಹರ ಹೆಸರು ಕೈ ಬಿಡುವ ಎಸ್ ಐ ಆರ್ ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣಾ ಆಯೋಗದ ಆದೇಶದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯವು ಮತದಾರ ನೋಂದಣಾಧಿಕಾರಿಗಳು, ಸಹಾಯಕ ಮತದಾರ ನೋಂದಣಾಧಿಕಾರಿಗಳು, ತಹಸೀಲ್ದಾರ್, ಪೌರಾಯುಕ್ತರಿಗೆ ಲೋಪದೋಷಗಳನ್ನು ಸರಿಪಡಿಸಲು ಸಲಹೆ ಸೂಚನೆಗಳನ್ನು ನೀಡಿದೆ.
ಕಳೆದ ಜ.೧ ರಂದು ಬೂತ್ ಮಟ್ಟದ ಅಧಿಕಾರಿಗಳಿಗೆ ಕಲರ್ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ನೀಡಿದ್ದು ಜ.೧೧ ರವರೆಗೆ ಮತದಾರರ ಭಾವಚಿತ್ರ ಪರಿಷ್ಕರಣೆ ( ಬ್ಲರ್ ಆಗಿರುವ, ಅತಿ ಸಣ್ಣ ಪೋಟೋಗಳು, ಭಾವಚಿತ್ರ ಸರಿಯಾಗಿ ಕಾಣದೇ ಇರುವ ಪೋಟೋಗಳನ್ನು ನಿಯಮಾನುಸಾರ ಸರಿಪಡಿಸುವುದು), ಮತದಾರರ ಹೆಸರು, ಲಿಂಗ, ವಿಳಾಸದಲ್ಲಿನ ಟೈಪೋಗ್ರಾಫಿಕಲ್ ಲೋಪದೋಷಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.