ಜನಗಣತಿ ಪೂರ್ವಸಿದ್ಧತಾ ಸಭೆಯಲ್ಲಿ ಡಿಸಿ ಜಿ.ಪ್ರಭು, ಎಡಿಸಿ ಎನ್.ಭಾಸ್ಕರ್ ಮತ್ತಿತರರು ಇದ್ದರು. 
ಚಿಕ್ಕಬಳ್ಳಾಪುರ

ಡಿಜಿಟಲ್‌ ಜನಗಣತಿ ಪ್ರಕ್ರಿಯೆ, ಸುಗಮ ನಿರ್ವಹಣೆಗೆ ಸಿದ್ಧತೆ

ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ದೇಶದ ಮೊಟ್ಟ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆಗೆ ಏ.1 ರಿಂದ ಚಾಲನೆ ನೀಡುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ "ಭಾರತ ಜನಗಣತಿ 2027"ಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
2026-27ನೇ ಸಾಲಿನ ಜನಗಣತಿ ಕಾರ್ಯವು ಜಿಲ್ಲೆಯಲ್ಲಿ ಏ.1 ರಿಂದ ಮೇ.15 ರವರೆಗೆ ನಡೆಯಲಿದೆ. ಇದಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಪ್ರಕ್ರಿಯೆ ಯಶಸ್ವಿಗೆ ಕೈಜೋಡಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮನವಿ ಮಾಡಿದೆ.
ಜನಗಣತಿ ಕಾರ್ಯಕ್ಕೆ 2,533 ಜನಗಣತಿದಾರರನ್ನು, 422 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 150 ರಿಂದ 200 ಮನೆಗಳನ್ನು ಒಳಗೊಂಡಂತೆ ಜಿಲ್ಲೆಯಲ್ಲಿ 3,121 ಬ್ಲಾಕ್ ಗಳನ್ನು ಗುರುತಿಸಲಾಗಿದೆ. ತಲಾ ಒಂದರಲ್ಲಿ 700 ರಿಂದ 800 ಜನರು ಇರಲಿದ್ದಾರೆ. ಜನಗಣತಿಗಾಗಿ ಜಿಲ್ಲೆಯಲ್ಲಿ 16 ಚಾರ್ಜ್ ಗಳನ್ನು ಮಾಡಿ, ತಲಾ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಜನಗಣತಿಗೆ ನಿಯೋಜನೆಯ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಜನಗಣತಿ ಕಾರ್ಯದ ಮೊದಲನೇ ಹಂತವಾಗಿ ಸ್ವಯಂ ಜನಗಣತಿ ಕಾರ್ಯವು ಏ.೧ ರಿಂದ ಏ.15 ರವರೆಗೆ ನಡೆಯಲಿದೆ. ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಸ್ವ ಗಣತಿ ಪೋರ್ಟಲ್ (https://se.census.gov.in) ಮೂಲಕ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಬೇಕು. ಹಾಗೆಯೇ ಅಗತ್ಯ ಮಾಹಿತಿಯನ್ನು ದೋಷರಹಿತವಾಗಿ ನಮೂದಿಸಬೇಕು. ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಐಡಿ ಸೃಜನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಗಣತಿದಾರರು ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗೆ ಏ.16 ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಐಡಿ ಯನ್ನು ಮುಂದಿನ ಪ್ರಕ್ರಿಯೆಗೆ ಗಣತಿದಾರಿಗೆ ನೀಡಬೇಕಾಗುತ್ತದೆ.
ಜನಗಣತಿಯ ಮೊದಲನೇ ಹಂತವು ಪ್ರತಿಯೊಂದು ಕುಟುಂಬ ರಚನೆ ಮತ್ತು ಮ್ಯಾಪ್ ಅನ್ನು ಒಳಗೊಂಡಿದೆ. ಸರ್ಕಾರ ಆದೇಶದಂತೆ ವಸತಿ ಗುಣಮಟ್ಟ, ಸೌಕರ್ಯಗಳು, ನೀರು, ವಿದ್ಯುತ್ ಮತ್ತು ಶೌಚಗೃಹ ವ್ಯವಸ್ಥೆ ಸೇರಿದಂತೆ ಇತರೆ ವಿಚಾರಗಳಿಗೆ ಸಂಬಂಧಿಸಿದ 34 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದು ೨೦೨೭ ನೇ ಸಾಲಿನಲ್ಲಿ ಫೆಬ್ರವರಿಯಿಂದ ಎರಡನೇ ಹಂತದ ಜನಸಂಖ್ಯಾ ಗಣತಿಗೆ ಅಡಿಪಾಯವಾಗಿದೆ.