ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಎಸ್ ಐ ಶರಣಪ್ಪ ಹಾಗೂ ಎಎಸ್ ಐ ವೆಂಕಟೇಶಪ್ಪ
ಚಿಕ್ಕಬಳ್ಳಾಪುರ: ಜಮೀನಿನ ಗಲಾಟೆ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ಲಂಚ ಪಡೆಯುತ್ತಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹಾಗೂ ಸಹಾಯಕ ನಿರೀಕ್ಷಕರು ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ಶರಣಪ್ಪ ಹಾಗೂ ಎಎಸ್ ಐ ವೆಂಕಟೇಶಪ್ಪ ಆರೋಪಿಗಳು. ತಾಲೂಕಿನ ಮೋಟ್ಲೂರಿನ ರಘು ಎಂಬುವವರು ನೀಡಿದ ದೂರನ್ನಾಧಾರಿಸಿ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತರು ಆರೋಪಿಗಳಿಬ್ಬರನ್ನು ಸಾಕ್ಷಿ ಸಮೇತ ಹಿಡಿದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮೋಟ್ಲೂರಿನಲ್ಲಿ ಜಮೀನಿನ ವಿಚಾರದ ಗಲಾಟೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಇದಕ್ಕೆ ಚಾರ್ಜ್ ಶೀಟ್ ಹಾಕುವಾಗ ದೂರುದಾರರೊಂದಿಗೆ ಪೊಲೀಸರು ಲಂಚಕ್ಕೆ ಪೀಡಿಸಿದ್ದಾರೆ. 1 ಲಕ್ಷ ರೂ ನೀಡಿದರೆ ಬಿ ರಿಪೋರ್ಟ್ ಹಾಕುವುದಾಗಿ ಹೇಳಿದ್ದಾರೆ. ಇದರ ಬಗ್ಗೆ ರಘು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಇನ್ನು 1 ಲಕ್ಷ ರೂಗಳ ಪೈಕಿ 70 ಸಾವಿರ ರೂಗಳನ್ನು ವೆಂಕಟೇಶಪ್ಪ ಹಾಗೂ ಶರಣಪ್ಪ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತರು ಹಣ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.