- ಸಾಕಾಣೆದಾರ ಆನಂದ್ (29) ಬಂಧಿತ.
- 4.50 ಲಕ್ಷ ರೂ. ಮೌಲ್ಯದ ಹಂದಿಗಳನ್ನು ಕಳವು
- 3 ಲಕ್ಷ ರೂ. ವಶಕ್ಕೆ
- ತಲೆ ಮರೆಸಿಕೊಂಡ ಆರೋಪಿಗಳ ಸೆರೆಗೆ ತಲಾಶ್
ಚಿಂತಾಮಣಿ: ತಾಲೂಕಿನ ಬುರುಡುಗುಂಟೆ ಹೊರವಲಯದಲ್ಲಿ ತೆರದ ಶೆಡ್ಗಳಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಹಂದಿಗಳನ್ನು ಕಳವು ಮಾಡಿದ್ದವನನ್ನು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿ, 3 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರದ ಅನಂತಪುರ ಜಿಲ್ಲೆಯ ಲೆನಿನ್ ನಗರದ ಹಂದಿ ಸಾಕಾಣೆದಾರ ಆನಂದ್ (29) ಬಂಧಿತ.
ಬುರುಡುಗುಂಟೆ ಗ್ರಾಮದ ವೆಂಕಟಪತಿ ಜಮೀನಿನಲ್ಲಿ 9 ತೆರೆದ ಶೆಡ್ ನಿರ್ಮಿಸಿ ಸೀಮೆ ಹಂದಿ ಸಾಕುತ್ತಿದ್ದರು. ಶೆಡ್ಗಳಲ್ಲಿ 100 ರಿಂದ 150 ಕೆಜಿಯ 25 ಹಂದಿ, 30ರಿಂದ 40 ಕೆಜಿಯ 85 ಸಣ್ಣ ಹಂದಿಗಳು ನ.6 ರಂದು ಕಳವಾಗಿದ್ದವು. ನ.9 ರಂದು ಮಾಲೀಕ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ, ಪಿಎಸ್ಐ ಜಗದೀಶ್ ನೇತೃತದ ಅಪರಾಧ ಸಿಬ್ಬಂದಿ ಪಿ.ಎನ್.ಅಮರೇಶ, ಜಗದೀಶ, ವಿಶ್ವನಾಥ, ನಾರಾಯಣ್, ತನಿಖಾ ಸಹಾಯಕ ಮಲ್ಲಿಕಾರ್ಜುನ್ ದವಲೇಶ್ವರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ 4 ಜನ ಸಹಚರರೊಂದಿಗೆ ಕದ್ದು, ಬೇರೆಡೆ ಮಾರಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳು, ವಾಹನವನ್ನು ಶ್ರೀದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಕೆಂಚಾರ್ಲಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.