ಚಿಕ್ಕಬಳ್ಳಾಪುರ: ಲಕ್ಷಾಂತರ ಬಂಡವಾಳ ಹೂಡಿ ರೈತರು ಹೈನುಗಾರಿಕೆ ಕೈಗೊಳ್ಳುತ್ತಿದ್ದು ಇದರ ನಡುವೆ ಕಳ್ಳರ ಕಾಟ ಹೆಚ್ಚಾಗಿದೆ. ಇದೇ ವೇಳೆ ಪೊಲೀಸರು ಹಂದಿಗಳ ಕಳ್ಳನ್ನು ಬಂಧಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಗ್ರಾಮದ ಹೊರವಲಯದಲ್ಲಿ ತೆರೆದ ಶೆಡ್‌ಗಳಲ್ಲಿ ಸಾಕಾಣೆಕೆ ಮಾಡುತ್ತಿದ್ದ ೪.೫೦ ಲಕ್ಷ ರೂ ಬೆಲೆ ಬಾಳುವ ಹಂದಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದ್ (55) ಬಂಧಿತ. ಈತನಿಂದ ಹಂದಿ ಮಾರಾಟದ 3 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನಕ್ಕೆ ಸಹಕರಿಸಿದ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
*ಪ್ರಕರಣದ ಹಿನ್ನೆಲೆ*
ಚಿಂತಾಮಣಿ ತಾಲೂಕಿನ ಬುರುಡುಗುಂಟೆಯ ವೆಂಕಟಪತಿ ಎಂಬುವರು ಕಳೆದ ಒಂದು ವರ್ಷದಿಂದ ತಮ್ಮ ಜಮೀನಿನಲ್ಲಿ ೯ ತೆರೆದ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡು ಸೀಮೆ ಹಂದಿಗಳನ್ನು ಸಾಕುತ್ತಿದ್ದರು. ಶೆಡ್‌ಗಳಲ್ಲಿ ಸುಮಾರು ೧೦೦ ರಿಂದ ೧೫೦ ಕೆ.ಜಿ ತೂಕದ ೨೫ ದೊಡ್ಡ ಹಂದಿಗಳನ್ನು ಮತ್ತು ೩೦ ರಿಂದ ೪೦ ಕೆ.ಜಿ ತೂಕದ ೮೫ ಸಣ್ಣ ಹಂದಿಗಳಿದ್ದು ಇತ್ತೀಚಿಗೆ ರಾತ್ರಿ ೧೦ ಗಂಟೆಯ ಬಳಿ ಶೆಡ್‌ಬಳಿ ಹಂದಿಗಳನ್ನು ನೋಡಿಕೊಂಡು ಮನೆಗೆ ಹೋಗಿ, ಮತ್ತೆ ಬೆಳಿಗ್ಗೆ ೬ ಗಂಟೆಗೆ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬಹಿರಂಗವಾಗಿತ್ತು.
ಕಳ್ಳರು ತೆರೆದ ಶೆಡ್‌ಗಳಿಗೆ ಹಾಕಿದ್ದ ಕಬ್ಬಿಣದ ಪೆನ್ಸಿಂಗ್ ಕಟ್ ಮಾಡಿ ಒಳ ನುಗ್ಗಿದ್ದರು. ದೊಡ್ಡ ಹಂದಿಗಳನ್ನು ವಾಹನದಲ್ಲಿ ಸಾಗಿಸಿದ್ದರು. ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಸ್ಥಳೀಯ ಚಲನವಲನ, ವಾಹನಗಳ ಓಡಾಟ, ಸಮೀಪದ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ನಾನಾ ಅಂಶಗಳನ್ನು ಆಧಾರಿಸಿ, ಕಳ್ಳನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.