ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕೈಗೊಂಡಿರುವ ಹೋರಾಟದಲ್ಲಿ ರೈತರು ಪಿಂಡ ಪ್ರದಾನ ಮಾಡಿದರು. 
ಚಿಕ್ಕಬಳ್ಳಾಪುರ

ಭೂ ಸ್ವಾಧೀನ ವಿರೋಧಿಸಿ ಪಿಂಡ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಭೂ ಸ್ವಾಧೀನ ವಿರೋಧಿಸಿ ಪಿಂಡ ಪ್ರದಾನ
ಚಿಕ್ಕಬಳ್ಳಾಪುರ: ಶಿಡ್ಲಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನ ವಿರೋಧದ ಅರ್ನಿದಿಷ್ಟಾವಧಿ ಹೋರಾಟದಲ್ಲಿ ರೈತರು ಪಿಂಡ ಪ್ರದಾನ, ಒನಕೆ ಹಾಗೂ ಪೊರಕೆ ಪೂಜೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕೈಗೊಂಡಿರುವ ಹೋರಾಟವು 128 ದಿನ ಪೂರೈಸಿದ್ದು, ಬಿಡದಿ ಟೌನಶಿಪ್​ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದಿದ್ದ ಉತ್ಸಾಹದಲ್ಲಿ ಸರ್ಕಾರದ ಧೋರಣೆಯ ವಿರುದ್ಧ ಕಿಡಿಕಾರಿದರು.
ರಸ್ತೆಯ ಮಧ್ಯೆ ಅನ್ನದ ಮುದ್ದೆ, ಹೂವು, ಅರಿಶಿನ ಕುಂಕುಮವನ್ನಿಟ್ಟು ಪಿಂಡ ಪ್ರದಾನ ಮಾಡಿದರು. ಹಾಗೆಯೇ ಚೇರಿನ ಮೇಲೆ ಒನಕೆ, ಪೊರಕೆಗಳನ್ನಿಟ್ಟು ಪೂಜಿಸಿದರು. ಇದರ ಮೂಲಕ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿನ ಕೃಷಿ ಫಲವತ್ತಾದ ಜಮೀನು ಬಲವಂತದಿಂದ ಕೆಐಎಡಿಬಿ ಕಿತ್ತುಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೈಗಾರಿಕೆಗಳ ಸ್ಥಾಪನೆ, ಅಭಿವೃದ್ಧಿ ನೆಪದಲ್ಲಿ ಕೃಷಿ ಜಮೀನು ಸ್ವಾಧಿನ ಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ. ಕೂಡಲೇ ಅಧಿಸೂಚನೆಯನ್ನು ಹಿಂಪಡೆದು ಅನ್ನದಾತರ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ರೈತ ಸಂದ ಜಿಲ್ಲಾ ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲಣ್ಣ, ಮುಖಂಡರಾದ ಬಸವಾಪಟ್ಟಣ ನಂಜುಂಡಪ್ಪ, ಭರತ್​, ನಾಗೇಂದ್ರ, ವೆಂಕಟೇಶಪ್ಪ ಇದ್ದರು.