ಗಾಂಜಾ ಮಾಲಿನೊಂದಿಗೆ ಆರೋಪಿಗಳು 
ಚಿಕ್ಕಬಳ್ಳಾಪುರ

ಗಾಂಜಾ ಮಾಲಿನೊಂದಿಗೆ ಖಾಕಿ ಪಡೆಗೆ ಸಿಕ್ಕಿ ಬಿದ್ದ ಒಡಿಸ್ಸಾ ಯುವಕರು

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದಲ್ಲಿನ ನಾರೇಪಲ್ಲಿ ಟೋಲ್ ಪ್ಲಾಜಾ ಬಳಿ ಒಡಿಸ್ಸಾ ಮೂಲದ ಅಸಾಮಿಗಳಿಂದ ೧೧ ಲಕ್ಷ ರೂ ಬೆಲೆ ಬಾಳುವ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಡಿಸ್ಸಾ ಮೂಲದ ರಾಮ್‌ಬಾಬು(೨೪), ಸಿಂಗಲ್ ಹಂಟಲ್ (೩೩) ಆರೋಪಿಗಳು.
ರಾಷ್ಟ್ರೀಯ ಹೆದ್ದಾರಿ ೪೪ ರ ನಾರೇಪಲ್ಲಿ ಟೋಲ್ ಪ್ಲಾಜಾ ಬಳಿ ಗಾಂಜಾ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಒಡಿಸ್ಸಾ ಮೂಲದ ಇಬ್ಬರನ್ನು ಪೊಲೀಸರು ವಿಚಾರಣೆ ಕೈಗೊಂಡಿದ್ದು ಆಗ ಆರೋಪಿಗಳು ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಲಿಲ್ಲ. ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ಚೀಲಗಳನ್ನು ಪರಿಶೀಲಿಸಿದಾಗ ೧೧ ಲಕ್ಷ ರೂ ಬೆಲೆಬಾಳುವ ೨೨ ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ನ್ಯಾಯಾಧೀಶರು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಾಗೇಪಲ್ಲಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ ಪೆಕ್ಟರ್ ಅಜಯ್ ಸಾರಥಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಬ್ ಇನ್ಸ್‌ ಪೆಕ್ಡರ್‌ಗಳಾದ ಸುನೀಲ್ ಕುಮಾರ್, ಮುನಿರತ್ನಂ, ಸಿಬ್ಬಂದಿ ಧನಂಜಯ್ ಕುಮಾರ್, ಸಾಗರ್, ವೆಂಕಟಶಿವ, ನಾಗಾರ್ಜುನ, ಲಕ್ಷ್ಮೀಪತಿ, ಕೃಷ್ಣಪ್ಪ, ರಾಜಪ್ಪ ಭಾಗವಹಿಸಿದ್ದು ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಕುಶಾಲ್ ಚೌಕ್ಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.