ಬಾಗೇಪಲ್ಲಿ ತಾಲೂಕಿನ ಜೀಕವಾಂಡ್ಲಪಲ್ಲಿ ಗ್ರಾಮದ ಮಾರುತಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಕರಕುಶಲ ವಸ್ತುಗಳನ್ನು ಸಿದ್ಧಪಡಿಸುತ್ತಿರುವುದು.
- 25 ಸಾವಿರದಿಂದ 1.50 ಲಕ್ಷ ಬಂಡವಾಳ ನಿಧಿ ಸೌಲಭ್ಯ
- ಮಹಿಳೆಯರ ಸ್ವಾವಲಂಬನೆಗೆ ನೆರವು
- ಮನೆ ಬಾಗಿಲುಗೆ ತಲುಪಿಸಲಿದ್ದಾರೆ.
ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಬಾಗೇಪಲ್ಲಿ, ಚೇಳೂರು ತಾಲೂಕು ವ್ಯಾಪ್ತಿಯ 25 ಗ್ರಾಪಂಗಳ 1950 ಸ್ತ್ರೀ ಶಕ್ತಿ ಸಂಘಗಳಲ್ಲಿ 19,825 ಮಹಿಳಾ ಸದಸ್ಯರಿಗೆ ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಂಎಲ್) ಯೋಜನೆ ವರದಾನವಾಗಿದೆ.
2023ರಿಂದ 2025ನೇ ಸಾಲಿನವರೆಗಿನ ಕೇಂದ್ರ ಪುರಸತ ಯೋಜನೆಯಡಿ 1950 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 25 ಸಾವಿರ ರೂ.ದಿಂದ 1.50 ಲಕ್ಷ ರೂ. ನಂತೆ ಒಟ್ಟು 9.20 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಸೌಲಭ್ಯ ನೀಡಲಾಗಿದ್ದು, ಕರಕುಶಲ, ಸಣ್ಣ ಕೈಗಾರಿಕೆ, ಕೋಳಿ, ಕುರಿ ಸಾಕಣೆ, ಹೈನುಗಾರಿಕೆ ಮೂಲಕ ಜೀವನ ನಿರ್ವಹಣೆಗೆ ನೆರವಾಗಿದೆ.
ಕೇಂದ್ರ, ರಾಜ್ಯ ಸರ್ಕಾರದ 70:30 ಅನುಪಾತದಲ್ಲಿ ದುರ್ಬಲ ವರ್ಗದ ನಿದಿ (ವಿಆರ್ಎಫ್) ಯೋಜನೆಯಡಿ ಆಸರೆ ಇಲ್ಲದ ಒಂಟಿ ಮಹಿಳೆ, ವಿಧವೆಯರು, ಅಂಗವಿಕಲ ಮಹಿಳೆಯರಿಗೆ 50 ಪೈಸೆ ಬಡ್ಡಿಗೆ ತಲಾ 1 ಲಕ್ಷ ರೂ.ನಂತೆ ಬಾಗೇಪಲ್ಲಿ, ಚೇಳೂರಿನ 22 ಗ್ರಾಪಂನ ಒಟ್ಟು 22 ಮಹಿಳಾ ಸದಸ್ಯರಿಗೆ ಒಟ್ಟು 22 ಲಕ್ಷ ರೂ. ಆರ್ಥಿಕ ನೆರವು ಕಲ್ಪಿಸಲಾಗಿದೆ.
ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್ಆರ್ಎಂಎಲ್) ಆನ್ಲೈನ್ ಪೋರ್ಟ್ಲ್ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ಸದಸ್ಯರಿಗೆ ಜಿಪಂ ನೇತೃತ್ವದ ಕೌಶಲ ಅಭಿವೃದ್ಧಿ, ಜೀವನೋಪಾಯ ಇಲಾಖೆಯಿಂದ ತರಬೇತಿ ಕೊಟ್ಟು ಯೋಜನೆಯ ಸೌಲಭ್ಯಗಳನ್ನು ತಾಲೂಕು ಯೋಜನಾಧಿಕಾರಿ ನೇರವಾಗಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಮನೆ ಬಾಗಿಲುಗೆ ತಲುಪಿಸಲಿದ್ದಾರೆ.
ಸೌಲಭ್ಯ ಪಡೆದ ಗ್ರಾಪಂಗಳ ವಿವರ
ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಪಂಗೆ 31.50 ಲಕ್ಷ, ದೇವರಗುಡಿಪಲ್ಲಿ 42.50 ಲಕ್ಷ, ಘಂಟಂವಾರಪಲ್ಲಿ 44.50 ಲಕ್ಷ, ಕಾನಗಮಾಕಲಪಲ್ಲಿ 49.50 ಲಕ್ಷ, ಕೊತ್ತಕೋಟೆ 21 ಲಕ್ಷ, ಮಾರಗಾನುಕುಂಟೆ 39.50 ಲಕ್ಷ, ಮಿಟ್ಟೇಮರಿ 38.25 ಲಕ್ಷ, ನಲ್ಲಪರೆಡ್ಡಿಪಲ್ಲಿ 34.25 ಲಕ್ಷ, ಪರಗೋಡು 28 ಲಕ್ಷ, ಪಾತಪಾಳ್ಯ 31.75 ಲಕ್ಷ, ತೊಳ್ಳಪಲ್ಲಿ 24 ಲಕ್ಷ, ತಿಮ್ಮಂಪಲ್ಲಿ 42.50 ಲಕ್ಷ, ಯಲ್ಲಂಪಲ್ಲಿ ಗ್ರಾಪಂ 41.25 ಲಕ್ಷ ರೂ. ಹಂಚಿಕೆಯಾಗಿದೆ. ಚೇಳೂರು ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಪಂ 23.25 ಲಕ್ಷ, ಪಾಳ್ಯಕೆರೆ 42 ಲಕ್ಷ, ನಲ್ಲಗುಟ್ಲಪಲ್ಲಿ 30.25 ಲಕ್ಷ, ಚಾಕವೇಲು 41.25 ಲಕ್ಷ, ಚೇಳೂರು 63 ಲಕ್ಷ, ಪೋಲನಾಯಕನಪಲ್ಲಿ 25.50 ಲಕ್ಷ, ಪುಲಗಲ್ 37.25 ಲಕ್ಷ, ರಾಶ್ಚೇರುವು 39.75 ಲಕ್ಷ, ಸೋಮನಾಥಪುರ ಗ್ರಾಪಂ 40.50 ಲಕ್ಷ ರೂ. ಹಂಚಿಕೆಗೊಂಡಿದೆ.
ಮೇಕೆ ಚರ್ಮದಿಂದ ಸಿದ್ಧಪಡಿಸಿದ ಕರಕುಶಲ ಅಲಂಕಾರಿಕ ವಸ್ತುಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಯಾವುದೇ ಶುಲ್ಕ ವಿಧಿಸದೆ ಸರಸ್ ಮೇಳದ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ಸಿದ್ಧಪಡಿಸಿದ ಅಲಂಕಾರಿ ವಸ್ತುಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಸಿಗುತ್ತಿದೆ. ಮೇಳದಲ್ಲಿ ನಡೆಯುವ ವಹಿವಾಟಿನ ಲಾಭದ ಜತೆಗೆ ಸರ್ಕಾರದಿಂದಲೂ ಆರ್ಡ್ರ್ ಬರುತ್ತಿರುವುದರಿಂದ ಮಾರುತಿ ಸ್ವಸಹಾಯ ಸಂಘ ಸಿದ್ಧಪಡಿಸುತ್ತಿರುವ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿ ಲಾಭಗಳಿಸಲು ಸಾಧ್ಯವಾಗುತ್ತಿದೆ.
| ಶಾರದಮ್ಮ, ಮಾರುತಿ ಸ್ವಸಹಾಯ ಸಂಘ ಜೀಕವಾಂಡ್ಲಪಲ್ಲಿ ಗ್ರಾಮ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ನೇರವಾಗಿ ಸವಲತ್ತು ಪಡೆದುಕೊಳ್ಳುತ್ತಿರುವ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ ಸಮಾಜದ ಮುಖ್ಯವಾಹಿನಿಗೆ ಬರುವುದರ ಜತೆಗೆ ಸಣ್ಣ ಕೈಗಾರಿಕೆ ಸ್ಥಾಪಿಸಿ ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಕೇಂದ್ರ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಮಹಿಳೆಯರಿಗೆ ಪೂರ್ಣ ಪ್ರಮಾಣದ ಸೌಲಭ್ಯ ತಲುಪಿಸಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕಾಗಿದೆ.
| ಎನ್.ಮಮತಾ ನಾಗರಾಜುರೆಡ್ಡಿ,
ದಿಶಾ ಸಮಿತಿ ಸದಸ್ಯರು, ಬಾಗೇಪಲ್ಲಿ