ಸಭೆಯಲ್ಲಿ‌ ಮಾತನಾಡುತ್ತಿರುವ ಸಂಸದ ಡಾ ಕೆ.ಸುಧಾಕರ್. 
ಚಿಕ್ಕಬಳ್ಳಾಪುರ

ಹುಣ್ಣಿಮೆ ದಿನ ಸಂಸದ ಸುಧಾಕರ್ ನೇತೃತ್ವದಲ್ಲಿ ನಂದಿ ಗಿರಿ ಪ್ರದಕ್ಷಿಣೆ

ಚಿಕ್ಕಬಳ್ಳಾಪುರ: ಹುಣ್ಣೆಮೆ ವಿಶೇಷ ದಿನದಂದು ಗಿರಿಪ್ರದಕ್ಷಿಣೆ ಕೈಗೊಳ್ಳುವ ತಮಿಳುನಾಡಿನ ತಿರುವನಮಲೈನ ಶ್ರೀ ಅರುಣಾಚಲೇಶ್ವರ ದೇಗುಲ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಜಿಲ್ಲೆಯಿಂದ ತಂಡೋಪ ತಂಡವಾಗಿ ಭಕ್ತ ಸಮೂಹವು ಹೋಗಿ ಬರುವುದು ಹೆಚ್ಚಾಗಿದೆ. ಕಾಲ್ನಡಿಗೆಯಲ್ಲಿ ಸಾಗಿ ದೇವರ ದರ್ಶನ ಪಡೆದ ಬಳಿಕ ಧನ್ಯತಾ ಭಾವ ಹೊಂದುತ್ತದೆ. ಇದರ ನಡುವೆ ಸಂಸದ ಡಾ ಕೆ.ಸುಧಾಕರ್‌ ನೇತೃತ್ವದಲ್ಲಿ ನಂದಿ ಗಿರಿ ಪ್ರದಕ್ಷಿಣೆ ಕೈಗೊಳ್ಳಲಾಗಿದೆ.
ಫೆ.1 ರಂದು ಮಾಘಮಾಸದ ಹುಣ್ಣಿಮೆಯ ಅಂಗವಾಗಿ ಸಂಜೆ 4 ಕ್ಕೆ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ವಿವಿಧ ಭಜನಾ ಮಂಡಳಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.
ಈ ನಿಟ್ಟಿನಲ್ಲಿ ಸಂಸದರು ಶುಕ್ರವಾರ ಗೃಹ ಕಚೇರಿಯಲ್ಲಿ ಸಾಂಸ್ಕೃತಿಕ ಸಂಘಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1936 ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ, ಅಲ್ಲಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಇದೇ ವೇಳೆ ಅವರು ನಂದಿ ಬೆಟ್ಟವನ್ನು ʼಆರೋಗ್ಯಧಾಮʼ ಎಂದು ಬಣ್ಣಿಸಿದ್ದರು. ಅಲ್ಲದೇ ತಲೆಮಾರುಗಳಿಂದಲೂ ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ಇಂತಹ ಹಸಿರು ಪ್ರದೇಶ ಭಕ್ತ ಸಮೂಹವು ಭಕ್ತಿಭಾವದಿಂದ ಸುತ್ತಾಡಿದಾಗ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ. ಇದಕ್ಕೆ 87 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ತಂಡವು ಪ್ರತಿ ಆಷಾಢಮಾಸದ ಕಡೇ ಸೋಮವಾರ ಇಲ್ಲಿ ಗಿರಿ ಪ್ರದಕ್ಷಿಣೆ ಕೈಗೊಳ್ಳುತ್ತ ಬರುತ್ತಿದೆ ಎಂದರು.
ಮಾಘಮಾಸದ ಹುಣ್ಣಿಮೆಯ ಫೆ.೧ ರಂದು ಸಂಜೆ 4 ಗಂಟೆಗೆ ನಂದಿಗಿರಿಧಾಮದ ಪ್ರದಕ್ಷಿಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳುನಾಡಿನ ಅರುಣಾಚಲೇಶ್ವರದಲ್ಲಿ ನಡೆಯುವ ಮಾದರಿಯಲ್ಲಿ ಇಲ್ಲಿಯೂ ಕಾಲ್ನಡಿಗೆಯಲ್ಲಿ ಭಕ್ತ ಸಮೂಹವು ಸಾಗಲಿದೆ. ಈ ಕಾರ್ಯಕ್ರಮದಿಂದ ಎಲ್ಲರಲ್ಲೂ ಭಕ್ತಿಭಾವ, ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ದೊರೆಯಲಿದೆ. ಇದು ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಮಹತ್ಕಾರ್ಯ. ಇದರಲ್ಲಿ ಯಾವುದೇ ಜಾತಿ ಧರ್ಮದ ಭೇದವಿಲ್ಲದೇ ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.