ಕಂದಾಯ ಸಚಿವ ಕೃಷ್ಷಬೈರೇಗೌಡ ಫಲಾನುಭವಿಗಳಿಗೆ ದಾಖಲೆ ಒದಗಿಸಿದರು. 
ಚಿಕ್ಕಬಳ್ಳಾಪುರ

ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕೊಂಡಾಡಿದ ಸಚಿವ

ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಖಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ ರಚನೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಿದ್ದು ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಸಮೀಪ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 1000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು, ಅದರ ಪ್ರತಿಫಲವೇ ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ,ಜನರಿಗೆ ನೆಮ್ಮದಿ ಸಿಕ್ಕಿದೆ. ರಾಜ್ಯದಲ್ಲಿ ಪ್ರಸ್ತುತದ ಸರ್ಕಾರ ಅಧಿಕಾರ ವಹಿಸಿಕೊಂಡಾಗ 49 ಲಕ್ಷ ಜಮೀನಿನ ಖಾತೆಗಳು ಮೃತಪಟ್ಟವರ ಹೆಸರಿನಲ್ಲಿದ್ದವು. ಇವರ ಹೆಸರಿನಲ್ಲೇ ಪಹಣಿಗಳು ಮುಂದುವರೆದು ಅವರ ವಾರಸುದಾರರಿಗೆ ಫೌತಿ ಖಾತೆ ಮೂಲಕ ವರ್ಗಾವಣೆಯಾಗದೇ ಉಳಿದು ಬಿಟ್ಟಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಕಳೆದ 1000 ದಿನಗಳಲ್ಲಿ 18,50,000 ಫೌತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೇ ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂ ಸುರಕ್ಷಾ ಯೋಜನೆಯಡಿ ಇಲ್ಲಿಯರೆಗೆ ರಾಜ್ಯದಲ್ಲಿ 71 ಕೋಟಿ ಪುಟದಷ್ಟು ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಜೊತೆಗೆ ಡಿಜಿಟಲೀಕರಣಗೊಳಿಸಲಾಗಿದೆ. ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗಿದೆ. ಬೆರಳ ತುದಿಯಲ್ಲೇ ಆನ್ ಲೈನ್ ಮೂಲಕ ಕಂದಾಯ ದಾಖಲೆಗಳನ್ನು ಪಡೆದುಕೊಳ್ಳುವ ಮಹತ್ತರ ಸುಧಾರಣೆಯನ್ನು ತರಲಾಗಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿ, ಎಂಆರ್ ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಆನ್ ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಭರವಸೆ ನೀಡಿದ್ದಾರೆ.